“ಕೂ ಹೂ! ಕೂಹೂ!” ಎನ್ನುತ ಹಾಡುವ
ಕಿನ್ನರ ಕಂಠದ ಕೋಗಿಲೆಯೆ,
ಮಾವಿನ ತಳಿರೊಳು ದೇವತೆಯಂದದಿ
ನೀನಡಗೇನನು ಹಾಡುತಿಹೆ?
ಹುಲ್ಲೆಯ ತೆರದಲಿ ನಲಿಯುತ ಹಸುರಲಿ
ಮೆಲ್ಲನೆ ಬನದಲಿ ಬರುವಾಗ
“ಕೂ ಹೂ! ಕೂ ಹೂ!” ಮೋಹದ ಗಾನದಿ
ದೇಹದಿ ಬಾಲ್ಯವ ನೀ ತರುವೆ!

ದೇವರ ಪೂಜೆಗೆ ಹೂವನು ಕೊಯ್ಯಲು
ಹೂವಿನ ತೋಟಕೆ ನಾ ಬರಲು,
ಅಂದಿನ ದಿನಗಳ ಹಿಂದಕೆ ಕರೆಯುವೆ,
ಚಂದದ ಕಂಠದ ಕೋಗಿಲೆಯೆ!

ಲೋಕಕೆ ಬಂದಿಹ ನಾಕದ ದೂತನೆ,
ಅಭಿನವ ಮಧುವನ ವೈಣಿಕನೆ,
ಎಚ್ಚರಿಸೆಚ್ಚರಿಸೊರಗಿದ ಜಡರನು,
ನೆಚ್ಚನು ನೆಡು, ವೈತಾಳಿಕನೆ!

ಮರಗಳ ಗಬ್ಬದೊಳಡಗಿಹ ಚೆಲುವಿನ
ಬಣ್ಣದ ತಳಿರನು ಬರಹೇಳು.
ಬಳ್ಳಿಯ ಮಡಿಲಲಿ ಹೊಂಚುತಲೊರಗಿಹ
ಮೊಗ್ಗುಗಳನು ಕರೆ, ಬರಹೇಳು!

ಇಂದಿರ ಬಿಲ್ಲಿನ ಸುಂದರ ರಂಗಿನ
ಗೊಂಚಲು ಹಣ್ಗಳ ತರಹೇಳು.
ಚಂಚಲ ಕಂಠದ ಸಂಚರಿಪಿಮ್ಮಡಿ-
ಯಿಂಚರವಾಣತಿ! ಬರಹೇಳು!

ಮಲ್ಲಿಗೆ, ಸಂಪಗೆ, ಹಿಪ್ಪೆಯು, ನಂದಿಯು,
ಕೇದಗೆ ಹೂಗಳ ಬರಹೇಳು;
ಕಂಪಿನ ಹೊರೆಯನು ತಲೆಯೊಳು ಹೊತ್ತು
ಮೇದಿನಿಗೀಯಲು ತರಹೇಳು!

ದುಂಬಿಗಳಳಿಗಳ ಮೊರೆಯುವ ಮಂದೆಯ
ಬನ್ನಿರಿ ಬಂಡುಣಲೆಂದೂಳು.
ಗಿಳಿ ಲಾವುಗೆ ಗೊರವಂಕಗಳಾಳಿಯ
ಮೇಳವ ಕಟ್ಟಲು ಕರೆ, ಹೇಳು!

ನಲ್ಲನ ಕೂಡುವ ನಲ್ಲೆಯ ಕರೆಯೈ
ತಳಿತಿಹ ಮಾಮರದುಯ್ಯಲೆಗೆ,
ನವ ಚೈತನ್ಯದ, ನವ ಸೌಂದರ್ಯದ,
ನವ ಮಧು ನಿಧುವನದುಯ್ಯಲೆಗೆ!

ಬೆಡಗಿನ ಬಿಂಕದ ಹುಡುಗಿಯ ತೆರದಲಿ
ಬನವಿರೆ ಹೊಸ ವೈಯಾರದಲಿ,
ಮಧುರ ವಿಹಂಗಮ ಕವಿಯೇ, ಕೋಗಿಲೆ,
ಕವಿಯನು ಕರೆ ಸುರಗಾನದಲಿ!

“ತೊಲಗಿತು ಮಾಗಿ” ಎನ್ನುತ ಕೂಗಿ
ಮುಕ್ತಿಯ ಸಾರೈ, ಸ್ವರಯೋಗಿ!
“ಬಂದಿತು ಸುಗ್ಗಿ” ಎನ್ನುತ ಹಿಗ್ಗಿ,
ಬಗ್ಗಿಸು, ಬಗ್ಗಿಸು, ರಸಯೋಗಿ!