ಮೂಡುತಿಹನು ಚಂದಿರಂ, ಚೆಲುವಿನಿಂದಿರಂ; ಪೂರ್ವ ನೀಲನಭವ ಬೆಳಗಿ ಬಹನು ಸೊಬಗ ಮಂದಿರಂ. ಶಿಖಿಯ ಚೆಂಡಿನಂದದಿಂ ಶಶಿಯು ರಂಜಿಪಂ: ತೊಳಗಿ ಮಂದಹಾಸದಿಂದ ಸರಿಯುವನು ದಿಗಂತದಿಂ. ಸುರಿದು ಕಾಂತಿವರ್ಷವಂ, ಶಾಂತಿಹರ್ಷವಂ, ಧರೆಯ ಮೋಹಿಸುತ್ತ ನಲಿದು ನೀಲನಭವನೇರುವಂ. ಪ್ರಕೃತಿ ಪರಮ ಮೋಹದಿಂ- ದೊಲಿವುದಿಂದುವಂ; ರಮ್ಯಕಾಂತಿ ಚುಂಬಿಸುತಿದೆ ವನಸರೋವರಂಗಳಂ. ಭೇದಿಪುದು ರಹಸ್ಯಮಂ ಪರಮಸೌಂದರಂ; ಸೊಬಗೆ ದಿವ್ಯಪುರುಷನಿಂದ ಬಂದ ರಮ್ಯ ಹಿಮಕರಂ! ನಲಿವ ತಳಿರು ಸುಮಗಳಂ ಲಲಿತ ಶಿಖರಮಂ ಇಂದು ಕಾಂತಿ ಬಂಧಿಸಿಹುದು ದಿವ್ಯ ಸುಧಾನಂದದಿಂ! ಸೊಬಗೆ ಪರಮ ಸಂತಸಂ, ಸುಖವೆ ಸೌಂದರಂ; ವಿಶ್ವಲೀಲೆಯಿಂದ ಜನಿಪ ನೋಟವಿದು ಮನೋಹರಂ! ಕೌಮುದಿಯು ವಿಲಾಸದಿಂ ರಚಿಸಿ ಸೇತುವಂ ಪರವನಿಹಕೆ ಬಂಧಿಸಿಹುದು ತೋರಿ ವಿಶ್ವದೈಕ್ಯಮಂ!