ಶ್ರೀ ಮುಜುಂದಾರರಿಂದ ಚಿತ್ರಿತವಾದ- ಮಸಣದ ತಲೆಬುರುಡೆಯೊಂದನ್ನು ಕರತಲದಲ್ಲಿಟ್ಟುಕೊಂಡು ನೋಡುತ್ತಿರುವ ತರುಣಿಯ ಚಿತ್ರದಿಂದ ಪ್ರೇರಿತವಾದದ್ದು.

ಹಿಗ್ಗುವೆ ಏತಕೆ ಚೆಲುವಿನ ಹೆಣ್ಣೆ?
ಕಡೆಗೀ ರೂಪಿಗೆ ಗತಿ ಮಣ್ಣೆ!
ನಿನ್ನೀ ಅಂದಕೆ ಚಂದಕೆ ಎಲ್ಲಾ
ಮಸಣವೆ ಅಂತ್ಯದ ಗತಿ ಹೆಣ್ಣೆ:
ಇಂದೀ ವದನವು ಸೊಬಗಿನ ಬೀಡು;
ಮುಂದಿದು ಮಸಣದ ಬಿಳಿ ತಲೆಯೋಡು!

ಯುವಕರ ಸೆರೆಹಿಡಿದವರನು ಮೋಹಿಸಿ
ಮುಗುದರ ಮಾಡುವ ಕಣ್ಣುಗಳು
ಹೊಳಪನು ಕಳೆಯುತ ಜೀವವನುಳಿಯುತ
ಭೀಕರ ತೂತುಗಳಾಗುವುವು.
ಇಂದೀ ದೇಹವು ಚೆಲುವಿನ ಬೀಡು;
ಮುಂದಿದು ಮಸಣದ ಎಲುಬಿನ ಗೂಡು!

ಎಲ್ಲರು ಚುಂಬಿಸಲೆಳಸುವ ಕೆನ್ನೆಗ
ಳಸ್ಥಿಯ ಗೂಡುಗಳಾಗುವುವು;
ಎಳನಗೆ ಬೀರುವ ನಿನ್ನಾನನವಿದು
ಹಲ್ಲನು ಚಿಲಿವುದು ಮರುಳಂತೆ!
ಇಂದೀ ವದನವು ಮದನನ ಬೀಡು:
ಮುಂದಿದು ಮಸಣದ ಬಿಳಿ ತಲೆಯೋಡು!

ಚಿನ್ನದ ರನ್ನದ ಒಡವೆಗಳಿಡುವೀ
ಶಿರ ತಾ ಪುಡಿಯೊಳು ಹೊರಳುವುದು;
ಹಿಮಮಣಿಗಳ ಮಣಿ, ಹಸುರೇ ಹಾಸಿಗೆ,
ಕಡೆಗಿದೆ ಚೆಲುವಿಗೆ ಗತಿ, ಹೆಣ್ಣೆ!
ಇಂದೀ ದೇಹವು ಚೆಲುವಿನ ಬೀಡು;
ಮುಂದಿದು ಮಸಣದ ಎಲುಬಿನ ಗೂಡು!