ಗರ್ವದಿಂದೆನ್ನ ಶಿರ ನಿಮಿರಿ ನಿಲ್ಲಲು, ದೇವ,
ನಿನ್ನ ಗದೆಯಾಘಾತ ಬಂದೆರಗಲಿ.
ದುಃಖದಿಂದೆನ್ನೆದೆಯು ನೊಂದು ಮೊರೆಯಿಡೆ, ಗುರುವೆ,
ನಿನ್ನೊಲ್ಮೆ ಬಂದದನು ಸಂತೈಸಲಿ.
ಮಾಯಮುಕುರದ ಮೋಹದಲಿ ಮನವು ಮುಳುಗುತಿರೆ
ನಿನ್ನ ಕೈ ಕನ್ನಡಿಯ ಪುಡಿಗೈಯಲಿ.
ಸರ್ವಜ್ಞನೆಂದೆದೆಯು ಸಂಕುಚಿತವಾಗುತಿರೆ
ನಿನ್ನ ಮೈಮೆಯ ಬೆಳಕು ಮೈದೋರಲಿ.
ಸಂದೇಹವೈತಂದು ಬಗೆಯ ಕದಡಲು, ದೊರೆಯೆ,
ನಿನ್ನ ನುಣ್ಚರ ಮೂಡಿ ಪರಿಹರಿಸಲಿ.
ನೂರಾರು ಹಾದಿಗಳ ಸಂಗಮದಿ ನಿಶೆ ಕವಿಯೆ
ನಿನ್ನ ಕಣ್ಬೆಳಕೆನ್ನ ಕಣ್ದೆರೆಯಲಿ.
ಒಣ ಕಟ್ಟಳೆಯ ಶಿಶಿರದಲಿ ಜೀವತರು ಕೊರಗೆ
ನಿನ್ನ ಚೇತನ ಚೈತ್ರದೆಲರೂದಲಿ.
ಜೀವ ದಾವಾಗ್ನಿಯಲಿ ಬೆಂದು ಬೇಗುದಿಗೈಯೆ
ನಿನ್ನ ಕರುಣಾಮೃತದ ಸರಿ ಸುರಿಯಲಿ.
ನಲ್ಮೆಯಿಂದೆನ್ನ ಬಲ್ಮೆಯ ನಿನ್ನ ಚಿತ್ತದಲಿ
ಶರಣುಗೈಯುವ ಬಲ್ಮೆಯೆನಗೆ ಬರಲಿ.
ಸಾವಿನಲಿ ಬಾಳಿನಲಿ ಸುಖ ದುಃಖವೆರಡರಲಿ
ನಿನ್ನತುಳ ಶಾಂತಿಯೆನ್ನೆದೆಯೊಳಿರಲಿ.

೧೦-೩-೧೯೨೯