ಕಾಡಿನ ಕೊಳಲಿದು, ಕಾಡ ಕವಿಯು ನಾ,
ನಾಡಿನ ಜನರೊಲಿದಾಲಿಪುದು.
ಬೃಂದೆಯ ನಂದನ ಕಂದನೆ ಬಂದು
ಗೊಲ್ಲನ ಕೊಳಲಲಿ ನಿಂದಿಹನೆಂದು
ಭಾವಿಸಿ ಮನ್ನಿಸಿ ಲಾಲಿಪುದು.
ಬೇಸರ ಕಳೆಯಲು ಬೇಸಗೆಯಲ್ಲಿ
ತರುಗಳ ತಳಿರಿನ ತಣ್ಣೆಳಲಲ್ಲಿ
ಸುಳಿಸುಳಿದಲೆಯಲು ಬಳಲಿದ ಗಾಳಿ
ಕಂಬಳಿಯೋಡೊಳು ತಂಪೊಳು ತೇಲಿ,
ತುರುಗಳು ಮೆಲುಕನು ಮೇಯುತಿರೆ
ಕರುಗಳು ತಾಯ್ಗಳ ಹಾಯುತಿರೆ
ಪಿಳ್ಳಂಗೋವಿಯನೂದಿದೆ ನಾನು,
ಮರ ಮಿಗಗಳಿಗಾಗೂದಿದೆ ನಾನು!


ಸಿರಿಬನದೇವಿಯ ಬೊಕ್ಕಸದಿಂದ
ಕದ್ದವು ಕೆಲವಿವು ಹಾಡುಗಳು;
ಸುಂದರ ಋತುಗಳ ಸಿರಿಗೈಯಿಂದ
ಸುಲಿದವು ಕೆಲವಿವು ಹಾಡುಗಳು;
ನೇಸರು ಚಂದಿರ ತಾರೆಗಳಿಂದ
ಕೆಲವನು ಭಿಕ್ಷೆಯ ಬೇಡಿದೆನು;
ಬೈಗಿನ ಹೆಣ್ಣನು ಬೆಳಗಿನ ಹೆಣ್ಣನು
ಕಾಡಿಸಿ ಕೆಲವನು ಕೂಡಿದೆನು.
ಹಗಲಿರುಳೆರಡರ ಸಂಗಮದಿಂದ
ಪಡೆದವು ಕಬ್ಬಗಳಲಿ ಕೆಲವು;
ಸುಖದುಃಖಗಳಾಲಿಂಗನದಿಂದ
ಹಡೆದವು ಹಾಡುಗಳಲಿ ಕೆಲವು;
ನೆಚ್ಚಳಿದೊಲುಮೆಯ ಕಂಬನಿ ತೆತ್ತಿಹ
ಭಾವದ ಗೀತೆಗಳಿವು ಕೆಲವು;
ಹುಡುಗಾಟದ ಸಿಂಗಾರದ ಸರಳತೆ
ಬಿನದಕೆ ಹಾಡಿದವಿವು ಕೆಲವು;
ಪರವಿಹವೆರಡರ ನವ ಅಭಿಸಾರವು
ಹೆತ್ತವು ಕೆಲವಿವು ಗಾನಗಳು;
ಜೀವನ ದೇವನ ನವ ಅನುರಾಗವು
ನೀಡಿದವಿವು ಕೆಲ ದಾನಗಳು!


ಸುಗ್ಗಿಯ ಬನದಲಿ ಹಸುರಿನ ಮೇಲೆ
ಹೂವುಗಳಂದದಿ ಕೆಲವನು ಆಯ್ದೆ;
ಮಂಜಿನ ಮಣಿಗಳ ಮಾಗಿಯ ಲೀಲೆ
ಶೋಭಿಸಲದರಿಂದಿನಿತನು ಕೊಯ್ದೆ;
ವಿಪಿನ ವಿಹಂಗಮ ಕಂಠವ ಸೇರಿ
ನುಣ್ಚರಗಳ ಗೆದ್ದೆನು ಬಲು ಹೋರಿ.
ಕಾಮನಬಿಲ್ಲನು ದಾರವ ಮಾಡಿ
ಮೊಳಗನು, ಮಿಂಚನು, ಹನಿಗಳ ಬೇಡಿ
ಹಾಡುಗಳಿನಿತನು ಕೋದಿಹೆನು!
ತುಂಗೆಯ ತೆರೆಗಳ ಚುಂಬನದಿಂದ
ಸಿರಿ ಮಲೆನಾಡಿನ ಸಿರಿ ಮಡಿಲಿಂದ
ಕವನಗಳಿನಿತನು ನೆಯ್ದಿಹೆನು!


ಬನಗಳೆ, ಗಿರಿಗಳೆ, ಹೊಳೆಗಳೆ, ತೊರೆಗಳೆ,
ಕೆರೆಗಳೆ, ಹೊಲಗಳೆ, ತೋಟಗಳೆ;
ತಾಯೇ ತುಂಗೆಯೆ, ಸಿರಿ ಮಲೆನಾಡಿನ
ಪಚ್ಚೆಯ ಪಸುರಿನ ನೋಟಗಳೆ;
ಬನಗಳ ಹೂಗಳ ಸೊಬಗನು ಮೀರುವ
ಚೆಲುವಿನ ಹೊಲಬಿಗ ಬಾಲೆಯರೆ;
ಬನದಲಿ ಬಯಲಲಿ ಹೊಳೆಯಲಿ ಮಳೆಯಲಿ
ನನ್ನೊಡನಾಡಿದ ಬಾಲಕರೆ;
ನಡೆಯಲಿ ಮೆಲ್ಲೆದೆ, ನುಡಿಯಲಿ ಮೆಲುದನಿ,
ನಿಮ್ಮದು ಮಲೆಗಳ ಸೋದರರೆ;
ರಂಗು, ತಿಮ್ಮು, ಗೌರಿ, ಗಿರಿಜೆ,
ಚಂದದ ಹೆಸರಿನ ಸೋದರರೆ;
ನಿಮ್ಮೊಡನಾಡಿದ ಗುಟ್ಟಿನ ನುಡಿಗಳ
ಬಯಲಿಗೆ ಬೀರುವೆ, ಮನ್ನಿಸಿರಿ!
ನಿಮ್ಮಂತೆಯೆ ನಾ ಹಾಡಲು ಬರದಿರೆ
ಪಾಮರ ಗೋಪನ ಮನ್ನಿಸಿರಿ!
ನಿಮ್ಮೆಲ್ಲರ ಶಿಷ್ಯನು ನಾ, ನಮಿಸುವೆ;
ಆಶೀರ್ವಾದವ ಬೇಡುವೆನು.
ನಿಮ್ಮಗಳೆಲ್ಲರ ಹರಕೆಯ ಬಲವಿರೆ
ಚೆನ್ನಾಗಿಯೆ ನಾ ಹಾಡುವೆನು!
ದನ, ಬನ, ಕಲ್ಗಳು ಮೆಚ್ಚಿದ ಕೊಳಲನು
ರಸಿಕರು ಮೆಚ್ಚದೆ ಮಾಣುವರೆ?
ಕಲ್ಗಳ ಕರಗಿಸಿದಿಂಚರವೆನ್ನದು
ಎದೆಗಳನೊಲಿಸದೆ ಮಾಣುವುದೆ?


ಬನದೊಳು ಮೊದಲೀ ವೇಣುವನಕಟಾ
ಕೇಳಿದ ಕಿವಿಗಳನೊಡೆದೆಯ, ದೇವ?
ಗೊಲ್ಲನ ಕೊಳಲಿಗೆ ಉಸಿರನು ಕೊಟ್ಟಾ
ಎದೆಯಲರೊಂದನು ಕೊಯ್ದೆಯ, ಶಿವನೆ!
ಗೊಲ್ಲನ ಹಾಡನು ಹುರಿದುಂಬಿಸಿದಾ
ತಮ್ಮನ ತಿಮ್ಮುವನೊಯ್ದೆಯ, ಹರಿಯೆ!
ಕೊಳಲನು ಮೆಳೆಯಿಂ ಕೊಯ್ದವ ನೀನೆ,
ಕೊಳಲಿಗೆ ಕಣ್ಗಳ ಸಮೆದನ ನೀನೆ,
ನಚ್ಚಿನ ಮೆಚ್ಚಿನ ಸೋದರನೆ!
ಗೊಲ್ಲನ, ಅಣ್ಣನ ಗಾನವ ಕೇಳಿ
ಹೆಮ್ಮೆಯೊಳುಬ್ಬುತ ಮುದವನು ತಾಳಿ
ನಲಿದೈ ಮುದ್ದಿನ ಸೋದರನೆ!
ಆ ಕಣ್ಣಿನ ಬೆಳಕಳಿದುದೆ ಅಕಟಾ!
ಆ ಬಾಯ್ಬೆಂದುದೆ ಅಕಟಕಟಾ!
ಆ ಎದೆಯೊರತೆಯು ಬತ್ತಿತೆ ಹಾ! ಹಾ!
ಬಾಳಿನ ಜಾತ್ರೆಯು ಮುಗಿದುದೆ ಹಾ!
ಗೊಲ್ಲನು ಕೊಳಲನು ಕೇಳುತ ನಲಿವರು
ಏನನು ಬಲ್ಲರು ಸೋದರನೆ?
ಗೊಲ್ಲನ ಜಸದಲಿ ಅರೆಪಾಲೆಲ್ಲಾ
ನಿನ್ನದೆ, ನಿನ್ನದೆ, ಸೋದರನೆ!


ಕಾಡಿನೊಳಿಬ್ಬರೆ ತಿರುಗಿದೆವಂದು,
ಹೂಗಳ ಕೊಯ್ದೆವು ಹಣ್ಗಳ ತಿಂದು.
ಬಣ್ಣದ ಚಿಟ್ಟೆಗಳನು ಹಿಡಿವಾಗ
ಮುದ್ದಿನ ತಿಮ್ಮುವೆ ಮುಂದಾಳು;
ಕೋಗಿಲೆಗಳ ನಾವಣಕಿಸುವಾಗ
ಅಲ್ಲಿಯು ನಾನೇ ಹಿಂದಾಳು;
ಕಡಿದಾದರೆಗಳನೇರುವ ಸಮಯದಿ,
ಹುತ್ತದ ಜೇನನು ಕೀಳುವ ಸಮಯದಿ,
ಬಿರುಸಿನ ಬೇಟೆಯನಾಡುವ ಸಮಯದಿ,
ಎಲ್ಲಿಯು ತಿಮ್ಮುವೆ ಕೆಚ್ಚಾಳು!
ನನಗಾತನೆ ನಮ್ಮೂರಿನ ಕಣ್ಣು;
ಈಗವನಾದನೆ ಬೇಳಿದ ಮಣ್ಣು!
ನನ್ನೆದೆಗಾತನೆ ಕನ್ನಡಿಯಂತೆ.
ಸೋದರನೆನ್ನಯ ಪಡಿನೆಳಲಂತೆ.
ಕನ್ನಡಿಯೊಡೆದುದು ಬರುಗನಸಂತೆ.
ಮೂಡಿತು ಮನದಲಿ ಮುರಿಯದ ಚಿಂತೆ.
ಒಂದೇ ವೀಣೆಯ ತಂತಿಗಳಂತೆ,
ಕಾಮನಬಿಲ್ಲಿನ ಬಣ್ಣಗಳಂತೆ,
ಹಾಡುವ ಕೊಳಲಿನ ಕಣ್ಣುಗಳಂತೆ
ಕೂಡಿದೆವಾಡಿದೆವೆಲೆ ತಮ್ಮಾ!
ಪರುಷವು ಹರಿದೀ ವೀಣೆಯ ವಾಣಿ.
ಬಡ ಮಳೆಬಿಲ್ಬಗೆಗೊಳಿಸದು ಇಂದು!
ಕಣ್ಣೊಂದಿಲ್ಲದ ಕೊಳಲಿದು ಇಂದು
ಕೊಡದಂದಿನ ಗಾನವ ತಮ್ಮಾ!


ಹೋದವರೆಲ್ಲರ ಊರನು ಸೇರಿದೆ,
ತಮ್ಮಾ, ಗೊಲ್ಲನ ದುಃಖಕೆ ಮಾರಿದೆ!
ನಾ ಸಾವಿಗೆ ಅಂಜುವೆನೆಂದಲ್ಲ,
ಅದರರ್ಥವ ತಿಳಿಯದನೆಂದಲ್ಲ;
ನಿನ್ನಾ ಸಂಗಕೆ ಕೊರಗುವೆನು;
ನಿನ್ನಾ ಪ್ರೇಮಕೆ ಮರುಗುವೆನು!
ಶ್ರೀಗುರುದೇವನ ಪಾದವ ಸೇರಿದೆ;
ಬಲ್ಲೆನು ನಾನೂ ಸೇರುವೆನು.
ಮಾಡುವ ಕೆಲಸವ ಮುಗಿಯಿಸಿ ಬೇಗನೆ
ಬಲ್ಲೆನು ನಾನೂ ಸೇರುವೆನು.
ನಿನ್ನಯ ನೆನಪಿಗೆ ಗೊಲ್ಲನು ನೀಡುವ
ಪ್ರೇಮದ ಗಾನದ ಕಾಣ್ಕೆಯಿದು!
ಶ್ರೀಗುರುದೇವಗೆ ನೀನೆ ನಿವೇದಿಸು
ಕಬ್ಬಿಗನಿಂಚರಗಾಣ್ಕೆಯಿದು!

೨೫-೩-೧೯೨೯