ಶ್ರೀ ಗೋಮಟೇಶ್ವರಾ, ಗೂಢತರ ಮೌನದಿಂ
ದೇಕಾಂಗಿಯಾಗಿ ನೀನಿಂತು ನಿಂತು
ಶತಮಾನಗಳನೆಷ್ಟ ದಣಿವ ಕಾಣದೆ ಕಳೆದೆ?
ಸೈರಣೆಯದಾವುದೈ? ಯಾವ ಶಾಂತಿ
ನಿನ್ನ ಹೃದಯವನೊಲಿದು ನಿತ್ಯತೆಯ ನೀಡಿತೈ
ಕಾಲದಾ ಕೋಟಲೆಯ ಸಹಿಸುವಂತೆ?
ನೀಲ ನಭದೊಳು ಶಿರವ ಭೂತಳದಿ ಚರಣಗಳ
ನಿರಿಸಿ ಪರವಿಹಗಳಂ ಸಂಧಿಸಿರುವೆ!
ನಿನ್ನ ಮೌನದ ಮೊಳಗನಾಲಿಸುತಲಿಹುದೀ ಜಗಂ;
ನಿನ್ನ ಕಂಗಳ ಮಿಂಚ ನೋಡುತಿದೆ ಧರೆಯ ನಯನಂ;
ನಿನ್ನೆದೆಯ ಸಿಡಿಲೆರಗುತಿದೆ ವಿಸ್ಮಯಾಶ್ಚರ್ಯದಿಂ;
ನಿನ್ನ ದಯದಾ ವರ್ಷವಿಳೆಗೀವುದಾನಂದಮಂ!

ಯೋಗೀಶ, ನಿನ್ನಾ ಪ್ರಶಾಂತವದನದೊಳೆಸೆವ
ನಸುನಗೆಯ ಭಾವಸೂಚನೆಯದೇನೈ?
ಸಿದ್ಧಪುರುಷರ ಮೊಗದ ನಿತ್ಯ ಮಂದಸ್ಮಿತಮೊ?
ಬ್ರಹ್ಮದಾನಂದನಾ ಪ್ರತಿಬಿಂಬಮೊ?
ಮೇಣಿಳೆಯ ನಿನ್ನಣುಗರವಿವೇಕಮಂ ನೋಡಿ
ನಗುವ ಕರುಣಾರಸದ ಪರಿಹಾಸ್ಯಮೊ?
ನಿರ್ವಾಣಪದಕೇರ್ದ ನಿನ್ನನುಂ ನಗಿಪೆಮ್ಮ
ತಿಳಿಗೇಡಿತನದ ಮಾಮಹಿಮೆಯೆನಿತು?
ನಿನ್ನಡಿಯ ಪೀಠದಡಿಯುರುಳುತಿರೆ ಕಾಲಚಕ್ರಂ
ಸೌಮ್ಯಭಾವವ ತೋರಿ ನಿಂತಿರುವೆಯಚಲಮಾಗಿ:
ಧಾರಿಣಿಯ ಗಲಿಬಿಲಿಯ ಸಹಿಸಲಾನಂದದಿಂದ
ನಿನ್ನಚಲತೆಯೊಳಿನಿತ ನೀಡೆಮಗೆ, ಗೋಮಟೇಶ!

ಚಕ್ರಾಧಿಪತ್ಯಂಗಳುದಿಸಿಯಳಿದುವು ಬೆಳಗಿ,
ಚಕ್ರೇಶರಮಿತರೊರಗಿದರು ಧರೆಗೆ;
ಮಕುಟಗದ್ದಿಗೆಯೆಲ್ಲ ಕೆನ್ನೀರಸಾಗರದಿ
ಮುಳುಮುಳುಗಿ ತೇಲಿದುವು ರೋಷದಿಂದ.
ಉನ್ಮತ್ತ ಖಡ್ಗಗಳ ಝಣ ಝಣತ್ಕಾರಮೀ
ಧರೆಯೆದೆಯ ಕಂಪಿಸಿತು ಮಾತ್ಸರ್ಯದಿ.
ಶಾಂತವಾಣಿಗಳೆಲ್ಲ ಮುಳುಗಿದುವು; ಲೋಕಮಂ
ತುಂಬಿದುದು ಹಾಕಾರದಾವೇಶವು.
ಕಿವಿಯೊಳಿಹುದಿಂದಿಗೂ ರಣಗಳಾ ಘೋರನಾದಂ;
ಕೆಂಬೊನಲನಾವಗಂ ನೋಡುತಿದೆ ನಿನ್ನ ನಯನಂ;
ಕಾಲದೇಶಗಳಲ್ಲಿ ಚಲಿಸದಿವೆ ಚಿತ್ರದಂತೆ;
ಆದೊಡಂ ನೀಂ ಸದಾ ಶಾಂತನೈ, ಗೋಮಟೇಶ!

ಬೇಹುಗಾರನೊ? ದೇವದೂತನೊ? ಬೋಧಕನೊ?
ಸಾಕ್ಷಿಯೋ? ಪರದಿಳೆಯ ಪಹರೆಯವನೊ?
ವೈಕುಂಠದಾ ದ್ವಾರಪಾಲಕನೊ? ನಿರ್ವಾಣ
ಮೂರ್ತಿಯೋ? ಮೇಣಭಯದಾಕಾರಮೊ?
ವೇಷಾಂತರವನಾಂತು ಧರೆಗಿಳಿದ ಭೈರವನೊ?
ಶಾಂತಿಯಾನಂದಗಳ ನಿಜರೂಪಮೊ?
ಮೇಣೆಮ್ಮ ದಿವ್ಯಾತ್ಮನ ಮಹಾ ಪ್ರಕಾಶಮೋ,
ಪೇಳೆಲೈ ನೀನಾರು, ಗೋಮಟೇಶ?
ವಾದಿಸುವ ಒಣ ವೇದಪಂಡಿತರ ನೋಡಿ ನೋಡಿ
ದರ್ಶನಗಳಾಚಾರ್ಯರಾಟೋಪಮಂ ಕಂಡು ನೀಂ
ನಿರ್ವಾಣ ತಾನನಿರ್ವಚನೀಯಮೆಂಬ ನಿಜಮಂ
ತಿಳಿಸಲೇಂ ಮೌನವ್ರತವಾಂತೆಯೋ, ಮೌನಿವರ್ಯ?

ಭಾರತಿಗೆ ಪರಕೀಯರೆಸಗಿದನ್ಯಾಯಮಂ
ಕಣ್ಣಾರ ಕಂಡ ನೀಂ ನಿತ್ಯಸಾಕ್ಷಿ.
ಆಕೆಯಾಭರಣಮಂ ಮೋಸದಿಂ ಸುಲಿದುದಕೆ
ಬ್ರಹ್ಮನಾಸ್ಥಾನದೊಳು ನೀನೆ ಸಾಕ್ಷಿ.
ಬಲಗೈಯ ಖಡ್ಗದಿಂದೆಡಗೈ ಕೊರಾನಿನಿಂ
ಭಾರತಿಯ ಪೀಡಿಸಿದ ಮುಸಲದಳಮಂ,
ಮೇಲೆ ಕ್ರಿಸ್ತನನಿರಿಸಿಯೊಳಗೆ ಸೈತಾನನಂ
ಮರೆಮಾಡಿ ಹೇಮಾಭಿಲಾಷೆಯಿಂದ
ವಾರಿಧಿಯ ದಾಂಟಿ ಬೇಹಾರಕೈತಂದರಂ,
ಕ್ರಿಸ್ತವೇಷವನಾಂತ ಸೈತಾನನಾಚಾರದಿಂ
ಭಾರತಿಯ ಪಣೆಯಿಂದ ಪದಕಿಳಿದ ಶೋಣಿತಮುಮಂ
ನೋಡಿರುವೆಯದರಿಂದ ಭಾರತಿಗೆ ನೀನೆ ಸಾಕ್ಷಿ!

ಬಾಲನಂತಿಹನೆಂಬರಾರ್ಹಂತ್ಯನಾದವಂ
ಮಾಹಾತ್ಮ್ಯಗಾವಗಂ ಕುರುಹು ದೈನ್ಯಂ!
ರವಿಶಶಿಗಳುಡುಗಣಗಳೊಡನೆ ಪಿಸುಮಾತಾಡಿ
ನಿಂತೊಡಂ ಮೇಘಗಳನಾಲಿಂಗಿಸಿ,
ನಿನ್ನ ಭೀಮಾಕಾರ ತಾಗದೆಮ್ಮಯ ಮನಕೆ;
ವಿಭುವಾದೊಡಣುಭಾವವೀಯುತಿರುವೆ!
ಕಣ್ಗೆ ಭೀಮಾಕಾರವಾಂತೊಡಂ, ಮನಕೆ ನೀಂ
ರಾಮನಂತಭಿರಾಮತರಮಾವಗಂ!
ನಿನ್ನ ಪೂಜಿಪ ಭಕ್ತರೀ ಧರೆಯ ಬಡಜನಗಳಂ
ಬರದಿಂದ ಪೊರೆಯದೆಯೆ, ಘೃತತೈಲವಾಹಿನಿಗಳಿಂ
ನಿನಗೆ ಜಳಕಂ ಗೈವುದಂ ಕಂಡು ಧರ್ಮಮುನಿಸಿಂ
ಪರಿಹಾಸ್ಯಮಾಡಿ ನಸುನಗುತಲಿಹೆ, ಗೋಮಟೇಶ!

ಹಂಗಿಸುತ ಕಾಲನಂ, ಚಾಳಿಸುತ ಸೃಷ್ಟಿಯಂ,
ಲಯವನಣಕಿಸುತ ನಿಂತಿರುವೆ ನೀನು.
ನಿನ್ನ ನೋಡಿದ ಹೃದಯದೊಳು ನೀನಿರದೆಯುದಿಸಿ
ನಿನ್ನಾತ್ಮದಭಯಮಂ ತುಂಬುತಿರುವೆ.
ಹೇ ಮಹಾಪ್ರಹರಿಯೇ, ನಿನ್ನ ನಿರ್ವಾಣದಾ
ದಿವ್ಯ ನಿರ್ಲಕ್ಷ್ಯತೆಯನೆಮಗೆ ನೀಡೈ.
ನಿನ್ನ ವಿಭುತನ ಪರವನಾವರಿಸಿಳೆಯ ಮೀರಿ
ಶೂನ್ಯದಳಲಾನಂದವೀಂಟುತಿಹುದು.
ಜಯತು ಜಯ ರಮ್ಯಕನ್ನಡನಾಡ ಧರ್ಮಮೂರ್ತಿ!
ಜಯತು ಕರ್ಣಾಟಕದ ಶಿಲ್ಪಿವರರಮಲಕೀರ್ತಿ!
ಜಯ ಜಯಾ ನಿರ್ವಾಣಗತಿಗೇರ್ದ ಯೋಗೀಶ್ವರಾ!
ಜಯ ಜಯಾ ಜಯತು ಶ್ರೀಗೋಮಟೇಶಾಧೀಶ್ವರಾ!

ಬ್ರಹ್ಮಸೃಷ್ಟಿಯ ಕೌತುಕವ ಕಿರಿದುಮಾಡೆ ನೀಂ
ಸೃಷ್ಟಿಸಿದ ಮೂರ್ತಿಯಿದೊ, ಶಿಲ್ಪಿವರ್ಯ?
ವಿಶ್ವಭಾವವನೊಂದೆ ವಿಗ್ರಹದಿ ಗೆಲಲೆಂದು
ಸ್ಪರ್ಧೆಯಿಂ ಕೆತ್ತಿದುದೊ, ಶಿಲ್ಪಿತಿಲಕ?
ಭಾವಿಸಿದೆ ಮೂರ್ತಿಯಂ: ಬ್ರಹ್ಮನಂ ಧ್ಯಾನಿಸಿದೆ;
ಕೆತ್ತಿದೈ ತಾಳ್ಮೆಯಿಂ: ಸಾಧನೆಯದು;
ಶ್ರೀ ಗೋಮಟೇಶ್ವರನ ವಿಗ್ರಹವ ಪೂರೈಸೆ
ಬ್ರಹ್ಮಸಾಕ್ಷಾತ್ಕಾರಮಾಯ್ತು ನಿನಗೆ!
ಧ್ಯಾನವಾವುದು ನಿನ್ನ ಕಲ್ಪನೆಯ ಮೀರಲರಿಗುಂ?
ನಿನ್ನ ಸಾಧನೆ ಯಾವ ಯೋಗಸಾಧನೆಗೆ ಹೀನಂ?
ನಿನ್ನ ಸಿದ್ಧಿಗೆ ಪಿರಿದದಾವುದೈ, ಶಿಲ್ಪಿಸಿದ್ಧ?
ನೀನೆ ಜೀವನ್ಮುಕ್ತ! ನಿನ್ನದೈ ಬ್ರಹ್ಮಯೋಗಂ!

೧೭-೯-೧೯೨೬