ಘೋರಾಂಧಕಾರದೊಳು ಕಾರ್ಮುಗಿಲನುಟ್ಟು
ಮಿಂಚೆಂಬ ತೇಜಸದ ಬಳೆಯ ತೊಟ್ಟು
ಭೈರವನ ತಂಬಟೆಯ ಗುಡುಗಿನೊಳಗಿಟ್ಟು
ಬಾ, ಎನ್ನನೆಚ್ಚರಿಸು, ಜನನಿ — ಹೇ ಜವನ ಜನನಿ.

ಬಳೆಯ ಮಿಂಚಿನೊಳೆನ್ನ ಕಣ್ಣ ಜಡತನವಳಿಸು,
ಕಿವಿಯ ನಿದ್ದೆಯ ಕೆಡಿಸು ಗುಡುಗಿನಿಂದ;
ಕಾರ್ಮುಗಿಲ ರೌದ್ರದಲಿ ಎದೆಯ ಭೀತಿಯ ಬಿಡಿಸು;
ಬಾ, ಎನ್ನನೆಚ್ಚರಿಸು, ಜನನಿ — ಹೇ ಜವನ ಜನನಿ.

ಆರತಿಯ ಬೆಳಕಿನಲಿ ಕಣ್ದೆರೆಯಲಿಲ್ಲ,
ಕೊಳಲು ನಾದವ ಕೇಳಿ ಕಿವಿಯೇಳಲಿಲ್ಲ.
ಮೂರುತಿಯ ಕಂಡೆದೆಯು ಕಲ್ಲಾಗಲಿಲ್ಲ;
ಬಾ, ಎನ್ನನೆಚ್ಚರಿಸು, ಜನನಿ — ಹೇ ಜವನ ಜನನಿ.

೩-೫-೧೯೨೭