ಚಂದಿರ ಬಾರೋ, ತೇಜೋ
ಮಂದಿರ ನೀ ಬಾರೋ.

ಮೂಡಣ ಗಗನವ ಶೋಭಿಸುತ
ಮೋಡಗಳೆಡೆಯೊಳು ರಂಜಿಸುತ
ಗಿರಿಗಳ ಬೆಳಗುತ
ತೊರೆಗಳ ತೊಳಗುತ
ನಾಡಿಗೆ ದೇಸಿಯ ನೆರೆಕೊಡುತ!

ಪರವಿಹವೆರಡನು ಸಂಧಿಸುತ
ಪರಮಾನಂದವ ಬಂಧಿಸುತ
ಕಾಂತಿಯ ಬೀರುತ
ಶಾಂತಿಯ ತೋರುತ
ತರಣಿಯ ಮನದೊಳು ವಂದಿಸುತ!

ಮಾಯಾ ಮೋಹವ ಮೋಹಿಸುತ
ಸಾಂತವ ನಾಂತದಿ ನೇಯಿಸುತ
ಕಮಲವನಳಿಸುತ
ಕುಮುದವನೊಲಿಸುತ
ಮಿಥ್ಯೆಗೆ ನಿತ್ಯತೆಯೀಯುತ್ತ!