ಜೀವ ರಥೋತ್ಸವವಿದನಣಕಿಸದಿರು,
ಎಲೆ ಸಂನ್ಯಾಸಿ!
ಸಾರಥಿಯನು ನೋಡಾದರು ಬಾ,
ತೇರನು ಎಳೆಯುವ ಸಂನ್ಯಾಸಿ!
ದುಷ್ಟವು ಎಂದಿದ ಜರೆಯದಿರು,
ಕಷ್ಟವು ಎಂದಿದ ತೊರೆಯದಿರು;
ಉತ್ಸವದೊಳಗಿಹುದೊಂದರ್ಥ.
ಸಂನ್ಯಾಸೀ, ಅಲ್ಲವೊ ಇದು ವ್ಯರ್ಥ!
ಓಡುವೆ ಎಲ್ಲಿಗೆ ಸಂನ್ಯಾಸಿ!
ಆಗುವೆಯಾ ನೀ ಶೂನ್ಯ ನಿವಾಸಿ?
ಸಾರಥಿ ಬಲ್ಲನು ಸತ್ಪಥವ,
ಕುಳಿತಿಹನಾತನೆ ನಡೆಸಲು ರಥವ!
ಸುಮ್ಮನೆ ಏತಕೆ ನಿಲ್ಲುವೆ ದೂರ?
ಸಂನ್ಯಾಸೀ, ಬಾ, ಎಳೆಯುವ ತೇರ!
ಜೀವ ರಥೋತ್ಸವವಿದನಣಕಿಸದಿರು,
ಎಲೆ ಸಂನ್ಯಾಸಿ!
ಸಾರಥಿಯನು ನೋಡಾದರು ಬಾ,
ತೇರನು ಎಳೆಯುವ ಸಂನ್ಯಾಸಿ!

೧೯-೧೧-೧೯೨೬