ಜೋಗುಳವ ಹಾಡೆನ್ನ ಮಲಗಿಸಮ್ಮಾ,
ಕೂಗು ಕರ್ಕಶವಿದನು ತಾಳೆನಮ್ಮಾ!

ಉನ್ಮತ್ತ ಖಡ್ಗಗಳ ಝಣ ಝಣತ್ಕಾರ!
ಬಿಲ್ಲಾಳುಗಳ ಕಠಿನ ಚಾಪಟಂಕಾರ!
ಪೃಥ್ವಿಯಂ ಚುಂಬಿಪರ ಘೋರ ಹಾಕಾರ!
ಹೇ ತಾಯೆ, ಸೈರಿಸೆನು, ರಣವಿದು ಕಠೋರ!

ಒಂದು ಕಡೆ ಸಿಡಿಗುಂಡ ಘೋರ ಢಂಕಾರ!
ಒಂದು ಕಡೆ ಯಂತ್ರಗಳ ತುಚ್ಛ ಚೀತ್ಕಾರ!
ಒಂದು ಕಡೆ ಗಡಿಬಿಡಿಯ ಸಂತೆ ವ್ಯಾಪಾರ!
ಒಂದೆಡೆಯು ಬಿಡುವಿಲ್ಲದೀ ಭೂಮಿ ಘೋರ!