ಎಲ್ಲಿರುವುದು ನಾ ಸೇರುವ ಊರು?
ಬಲ್ಲಿದರರಿಯದ, ಯಾರೂ ಕಾಣದ
ಎಲ್ಲಿಯು ಇರದಾ ಊರು!
ಭವಭಯವಿಲ್ಲದ ಊರಂತೆ
ದಿವಿಜರು ಬಯಸುವ ಊರಂತೆ
ತವರೂರಂತೆ, ಬಹುದೂರಂತೆ,
ಕವಿಗಳು ಕಂಡಿಹ ಊರಂತೆ!
ಎಲ್ಲಿರುವುದು ನಾ ಸೇರುವ ಊರು?
ಬಲ್ಲಿದರರಿಯದ, ಯಾರೂ ಕಾಣದ,
ಎಲ್ಲಿಯು ಇರದಾ ಊರು!

ಅಲ್ಲಿರುವುದು ನಾ ಸೇರುವ ಊರು!
ಬಲ್ಲಿದರರಿತಾ, ಎಲ್ಲರು ಕಾಣುವ,
ಎಲ್ಲಿಯು ಇರುವಾ ಊರು!
ಜ್ಞಾನಿಗಳಿರುವುದೆ ಆ ಊರು.
ಧ್ಯಾನದ ಮೇರೆಯೆ ಆ ಊರು.
ನಾನಿಹ ಊರು, ಸಮೀಪದ ಊರು,
ಮೌನತೆಯಾಳುವ ತವರೂರು!
ಅಲ್ಲಿರುವುದು ನಾ ಸೇರುವ ಊರು,
ಬಲ್ಲಿದರರಿತಾ, ಎಲ್ಲರು ಕಾಣುವ,
ಎಲ್ಲಿಯು ಇರುವಾ ಊರು!