ಹಗಲಿರುಳು ನೀನೆನ್ನ ಹಿಂಬಾಲಿಸಿದೆ, ಜನನಿ,
ಅದನರಿಯದೇಕಾಂಗಿ ಎಂದು ತಿಳಿದೆ;
ನಿನ್ನ ನೂಪುರರವಂ ಕೇಳಿಬರಲೆನಗಂದು
ಅದು ಬರಿಯ ಮಾಯೆ ಎಂದರಿತೆ, ತಾಯೆ.

ಜಗದ ಗಡಿಬಿಡಿಯೊಳಾಂ ಸಿಲುಕಿರಲು ನಿನ್ನಡಿಯ
ಗೆಜ್ಜೆಗಳ ರವಮೆನಗೆ ಕೇಳಲಿಲ್ಲ;
ತುಂಬಿರಲು ಕೊಳ್ಳುವರ ಮಾರುವರ ಗಡಿಬಿಡಿಯು
ನಿನ್ನ ನೂಪುರ ರವವನರಿವೆನೆಂತು?

ಜಗದ ಸಂತೆಯನಗಲಿ ಗಡಿಬಿಡಿಯನಲ್ಲಿಟ್ಟು
ಅಡವಿಗಳ ಹೃದಯಮಂ ಸೇರಲೀಗ,
ಅಂದು ಕೇಳದ ರವಂ ಇಂದು ಕೇಳುವುದೆನಗೆ
ಅಂದು ಕಾಣದ ರೂಪು ಥಳಿಸುತಿಹುದು!