ಬಿತ್ತರದ ತಿಳಿಯಾಳ ಬಾಂದಳದಿ ನಡುವಗಲ
ಬೆಂಗದಿರನುರಿಬಿಸಿಲು ಚುಚ್ಚುತಿಹುದು;
ಕಾಯಿಸಿದ ಕಬ್ಬಿಣದ ಕಾವಲಿಯ ತೆರದಿಂದೆ
ಹಬ್ಬಿ ಮರುಭೂಮಿಯುರಿ ಹೆಚ್ಚುತಿಹುದು!
ತಂಪಿಲ್ಲ, ಸೊಂಪಿಲ್ಲ; ದನಿಯಿಲ್ಲ, ಹನಿಯಿಲ್ಲ;
ಬಿಸಿಯುಸಿರು ಬೆಂಕಿಯನೆ ಬೀಸುತಿಹುದು!
ಸಾವು ಸದ್ದುಳಿದಲೆವ ಸುಡುಗಾಡಿನಂದದಲಿ
ಬಾಯಿರದ ಬೆದರಿಕೆಯು ತೊಳಲುತಿಹುದು!
ಸುಡುವ ಮರಳಿನ ಮೇಲೆ ಕುಳಿತ ಇವನಾರು?
ಮುಡಿಗೆದರಿ ಮರುಳಿವನು ಮಾಡುತಿಹುದೇನು?
ಗಣಿಸದಾತಪದುರಿಯನೇಂ ಗುಣಿಸುತಿಹನು?
ಮರಳು ಕಣಗಳ ಮುದದಿಯೊಲಿದೆಣಿಸುತಿಹನು!

೮-೩-೧೯೨೯