ಮಲೆಯ ಮೇದು ಹಣ್ಣ ತಿಂದು
ಮುದವು ಮೀರೆ ಚಿಮ್ಮಿನೆಗೆವ
ಎರಳೆ ಸರಸವಾಡುವೆಡೆಯೊಳ್
ಉದಿಸಿ ಬರುವೆನು!
ಅರಳ ಕೂಡಿ, ಮಾಲೆ ಮಾಡಿ
ಎರೆಯನರಸಿ ಕರೆಯುತಲೆವ
ತರಳೆಯಂತೆ ಮೋಹವೆರಚಿ
ಮೊರೆದು ಹರಿವೆನು!
ಎಲರಿನಲ್ಲಿ ತಲೆಯನೊಲೆವ
ತಳಿರಿಡಿದೆಳೆವಳ್ಳಿಯಂತೆ
ಬಳುಕಿಯತ್ತ ಬಾಗಿಯಿತ್ತ
ಉರುಳಿ ಮೊರೆವೆನು!
ದರಿಯ ಹಾರಿ ಅರೆಯ ಜಾರಿ
ಕರಿಯ ನೆರಳ ಹಳುವ ನುಸಿದು
ಗುರಿಯ ಮರೆತ ಕಳ್ಳನಂತೆ
ನುಸುಳುತಿರುವೆನು!
ಬನದ ಸೊಬಗ ನೋಡಿ, ಹಾಡಿ,
ವಿಹಗದುಲಿಯ ಕೇಳಿ, ತಾಳಿ
ಮುದವನೊಂಟಿಯಾಗಿ ಹರಿವ
ಕವಿಯೊಲಲೆವೆನು!
ಅರಿಯೆ ನಾನು ಸೇರುವೆಡೆಯ,
ಅರಿಯೆ ದಾರಿ ಯಾವುದೆಂದು.
ಮುಂದೆ ಮುಂದೆ ಬಿಡದೆ ಹರಿವೆ,
ಹರಿವ ಹರುಷಕೆ
ಬರುವ ಜನರು ಬರುತಲಿರಲಿ
ಮೊರೆವೆನೆಂದಿಗೂ!
ತೆರಳುವವರು ತೆರಳುತಿರಲಿ
ಹರಿವೆನೆಂದಿಗೂ!

೬-೬-೧೯೨೮