ದಾರಿ ತೋರೆನಗೆ, ಗುರುವೇ,
ದಾರಿ ತೋರೆನಗೆ.

ಕವಲೊಡೆದ ಹಾದಿಗಳು;
ಕವಿದಿಹುದು ಕತ್ತಲೆಯು;
ಕಿವಿಗೊಟ್ಟು ಕೇಳಿದರೆ
ಕರೆವ ದನಿಯಿಲ್ಲ;
ಕಣ್ಣಿಟ್ಟು ನೋಡಿದರೆ
ಹೊಳೆವ ಸೊಡರಿಲ್ಲ!

ತಿಮಿರವನು ಕುಡಿ ಕುಡಿದು
ಮುಳುಗಿಹವು ಮೂರ್ಛೆಯಲಿ
ಬನ ಬಯಲು ಬುವಿ ಬಾನು
ಹೊಳೆ ಕೆರೆಗಳೆಲ್ಲ:
ಭೀಕರದ ಮೌನದಲಿ
ಬಗೆಹರಿವುದಿಲ್ಲ!

ಹೆಪ್ಪುಗಟ್ಟಿಹುದಿರುಳು!
ಮರಳಿನಲಿ ಕೆಸರಿನಲಿ
ಮುಂದೆ ತೆರಳಿದ ಜನರ
ಹೆಜ್ಜೆಗಳ ಕಾಣೆ;
ಕತ್ತಲಲಿ ಕೈಹಿಡಿದು
ಕಾಯುವರ ಕಾಣೆ!

೩-೧-೧೯೨೯