ದಿನವು ನಿನ್ನ ಕೂಡಿ ನಲಿವೆ,
ದೇವ, ಮಾತನಾಡಿ ನಲಿವೆ;
ನಲಿವೆ ನಿನ್ನ ವಸನವುಟ್ಟು,
ನಲಿವೆ ನಿನ್ನ ಬೆಡಗ ತೊಟ್ಟು;
ನಿನ್ನ ರೂಪ ಧರಿಸಿ ನಾನು,
ನೋಡಿ ಕುಣಿವೆ ನಲಿಯೆ ನೀನು;
ನಿನ್ನ ದನಿಯ ಸಿರಿಯನೊಲಿವೆ,
ಹೆಮ್ಮೆಯಿಂದ ಹಾಡಿ ನಲಿವೆ!
ಸುದ್ದಿಯೊಂದು ಹರಡಲಿಲ್ಲ;
ಯಾರು ಬಳಿಗೆ ಬಾರಲಿಲ್ಲ.
“ಧನ್ಯ ನೀನು” ಎನ್ನಲಿಲ್ಲ;
ನಿನ್ನನಂತೂ ಕೇಳ್ದರಿಲ್ಲ.
ಆದರೆನ್ನ ನೋಡಿ ಎಲ್ಲ
ಹುಚ್ಚನೆಂದರು.
ಬಂದ ಕೆಲರು ಹಾಸ್ಯಕಾಗಿ
ಬಳಿಗೆ ಬಂದರು.

ಇಂದು ನಾನು ಗಳಿಗೆಯೊಂದೆ
ದೊರೆಯ ಬಳಿಗೆ ಹೋಗಿ ಬಂದೆ.
ಅವನಿಗೇನು ಹಾಡಲಿಲ್ಲ;
ಸಲಿಗೆಯಿಂದ ನುಡಿಯಲಿಲ್ಲ.
ಅವನು ದೊರೆಯತನದೊಳಿದ್ದ;
ಪ್ರಜೆಯತನದೊಳಾನು ಇದ್ದೆ.
ಅವನ ಸಿರಿಯನೊಲಿಯಲಿಲ್ಲ,
ಕಂಡು ಹೆಮ್ಮೆಪಡಲು ಇಲ್ಲ.
ಸುದ್ದಿ ಹರಡಿತೂರೊಳೆಲ್ಲ;
ಎನ್ನ ಬಳಿಗೆ ಬಂದರೆಲ್ಲ.
‘ಧನ್ಯ ನೀನು’ ಎಂದರೆಲ್ಲ.
ರಾಜನನ್ನು ಕೇಳ್ದರೆಲ್ಲ.
ನಾನೆ ಹುಚ್ಚೊ? ಅವರೆ ಹುಚ್ಚೊ?
ಯಾರು ಬಲ್ಲರು!
ನೀನೆ ಹೆಚ್ಚೊ? ದೊರೆಯೆ ಹೆಚ್ಚೊ?
ಯಾರು ಬಲ್ಲರು?

೬-೮-೧೯೨೭