ಸೂರ್ಯನು ಚಂದ್ರನು ಭೂಮಿಯು ಗ್ರಹಗಳು
ಕಾಣುವ ಕಾಣದ ತಾರೆಗಳು
ಆದಿಯೊಳೆಲ್ಲಾ ಒಂದಾಗಿರಲು,
ಕರಗುತ ಕುದಿಯುತ ಹೊಳೆಯುತಲಿರಲು,
ಮಿಡುಕದೆ ಚಲಿಸದೆ ಮೌನದೊಳಿರಲು;
ಕಾಲದೇಶಗಳು ಮೈಮರೆತಿರಲು,
ಚೇತನ ಜಡದೊಳಗವಿತಿರಲು,
ಸುಂದರ ನದಿ ವನ ಗಿರಿ ಝರಿ ಎಲ್ಲಾ
ಬೆಂಕಿಯ ಮುದ್ದೆಯೊಳಡಗಿರಲು,
ವೀಣೆಯ ಮೀಂಟಲು ತೊಡಗಿದೆ ನೀನು,
ದಿವ್ಯ ಸನಾತನ ವೈಣಿಕನೆ!


ಬೀಣೆಯ ದನಿಯಿಂಚರವನು ಕೇಳಿ
ಕಣ್ದೆರೆದೆದ್ದುದು ಬ್ರಹ್ಮಾಂಡ!
ಹರಿದುದು ಆದಿಯನರಿಯದ ನಿದ್ದೆ;
ಕುಣಿಯಲು ತೊಡಗಿತು ಬೆಂಕಿಯ ಮುದ್ದೆ.
ಕಾಲದೇಶಗಳು ಮೈತಿಳಿದೆದ್ದುವು;
ಚೇತನ ಜಡದಿಂ ಪೊರಮಡಲೆಳಸಿತು,
ಮೆಲ್ಲನೆ ಶಕ್ತಿಯು ಮೂಡಿದುದು!
ವೀಣೆಯ ಮಿಡಿಯುತ ಕುಣಿಯಲು ತೊಡಗಿದೆ
ಮಾಯಾ ನರ್ತಕ ನಟರಾಜ!
ವೀಣೆಯೆ ಭೇರಿಯ ರೂಪವ ತಾಳಿತು;
ನಡುಗಿತು ಭಯದಲಿ ಬ್ರಹ್ಮಾಂಡ!


ಗಿರ್ರನೆ ತಿರುಗುವ ಬೆಂಕಿಯ ಮುದ್ದೆಯು
ಪುಡಿಪುಡಿಯಾಯಿತು ನೃತ್ಯದಲಿ!
ಕಿಡಿಗಳು ಹಬ್ಬುತ ನಾನಾ ದೆಸೆಗೆ
ಕುಣಿದುವು ಭಯದಲಿ ತಾರೆಗಳಾಗಿ;
ರವಿಯಂದದಿ ನಿಂತುದು ಕಿಡಿಯೊಂದು.
ಗ್ರಹಗಳ ರೂಪವನಾಂತುವು ಕೆಲವು
ಭಯದಲಿ ಗುರುವಿಗೆ ಕೈಮುಗಿದು;
ಜಡದಿಂ ನೆಗೆಯಿತು ಸಂತಸದಿಂದ
ಜಯಜಯ ಎನ್ನುತ ಚೇತನವು!
ಭೂಮಿಯು ರವಿಯಿಂ ದೂರಕೆ ಹಾರಿ
ತಿರುಗಲು ತೊಡಗಿತು ಬೆರಗಾಗಿ!


ಭೂಮಿಯ ಮೆಯ್ಯಿಂ ಸಿಡಿದಾ ತಿಂಗಳು
ಬಲಗೊಂಡೆಸೆದುದು ಸೌಮ್ಯದಲಿ!
ಆನಂದಾಖ್ಯೆಯ ತಾಳಿತು ವೀಣೆ;
ಧರ್ಮದ ಹೆಸರನು ಹೊಂದಿತು ಭೇರಿ!
ನಡುಗುವ ಭೂಮಿಯ ಬಳಿ ನೀ ಬಂದೆ
ಚೆಲುವಿನ ಮೋಹದ ರೂಪವ ಧರಿಸಿ,
ಪುಣ್ಯ ಪುರಾತನ ವೈಣಿಕನೆ!
ಬಳಿಯಲಿ ಬೀಣೆಯ ಮೀಟುತ ನಿಂತೆ;
ಉರಿಯುವ ಗೋಳವು ತಂಪಾಯ್ತು!
ತರಳೆಯ ರೂಪದಿ ನಲಿಯುತ ನಗುತ
ಹೊರಹೊಮ್ಮಿದಳೈ ಭೂದೇವಿ!


ವಿಶ್ವದ ಚೆಲುವೇ ಮೈಗೊಂಡಂದದಿ
ನಿನ್ನೆದುರಾಡಿದಳೆಳೆವೆಣ್ಣು!
ಮೋಹಕೆ ಸಿಲುಕಿದೆ, ಹೇ ಸನ್ಯಾಸಿ;
ಚುಂಬಿಸಿಯಾಲಿಂಗಿಸಿ ಮೈಮರೆತೆ!
ಹುಟ್ಟಿದುವಾಗಲೆ ನದಿ ವನ ಖಗ ಮಿಗ;
ಜನಿಸಿದನಾಗಲೆ ತಿರೆಯ ಬಸಿರಿನಲಿ
ನಿನ್ನನೆ ಹೋಲುವ ಮಾನವನು!
ನಿನ್ನಾ ಚೆಲುವಿನ ಕಂದನನೆತ್ತಿ
ಮೋಹದೊಳಾತನನೆದೆಗೊತ್ತಿ
ಮುದ್ದಿಸಿ, ಚುಂಬಿಸಿ, ಕಣ್ಮರೆಯಾದೆ;
ಯೋಗಿಯೆ, ವೈಣಿಕ, ನಟರಾಜ!

೩-೧೨-೧೯೨೮