ನಡೆ ಮುಂದೆ, ನಡೆ ಮುಂದೆ, ನಡೆ ಮುಂದೆ, ಮುಂದೆ!
ವೇದಾಂತ ಕೇಸರಿಯೆ, ನುಗ್ಗಿ ನಡೆ ಮುಂದೆ!
ಗರ್ಜಿಸುತ ನಡೆ ಮುಂದೆ,
ನಿರ್ಭಯದಿ ನಡೆ ಮುಂದೆ.
‘ತತ್ತ್ವಮಸಿ’ ‘ಬ್ರಹ್ಮಾಸ್ಮಿ’ ‘ಶಿವ ನಾನು’ ಎಂದು,
ವೀರಾತ್ಮ, ಧೀರಾತ್ಮ, ನಡೆ ನುಗ್ಗು ಮುಂದೆ!
ಹಿಂದಿರುಗಿ ನೋಡದಿರು, ಅಭಯಾತ್ಮ ನೀನು;
ಬೆದರದಿರು! ಬೆದರದಿರು! ಅಮೃತಾತ್ಮ ನೀನು!
ಆದ್ಯಂತವಿಲ್ಲದವ ನೀನು,
ಆನಂದಶೀಲನೈ ನೀನು!
ಹಂಗಿಸಿಯದೃಷ್ಟವಂ ನುಗ್ಗು ನಡೆ ಮುಂದೆ,
ಭಂಗಿಸುತ ಮೃತ್ಯುವಂ ನಡೆ ಮುಂದೆ, ಮುಂದೆ.
ಜಗದಿ ನಿನ್ನನು ತಡೆವ ಧೀರರಾರಿಲ್ಲ;
ನಿನ್ನ ನಾದಕೆ ಕಂಪಿಪುದು ಲೋಕವೆಲ್ಲ.
ಅದ್ವೈತವಿಲಯಾಗ್ನಿ ನಿನ್ನ
ಹೃದ್ವನವ ತುಂಬಿಹುದು ಮುನ್ನ!
ಅಶುಚಿಯೆಲ್ಲವ ದಹಿಸಿ ನುಗ್ಗಿ ನಡೆ ಬೇಗ,
ಪಾಪಪುಣ್ಯಗಳಿರಲಿ ನಡೆ ಮುಂದಕೀಗ.
ಪಾಪಿ ನಾನೆಂದಳಲು ಇದು ಕಾಲವಲ್ಲ!
ಎದ್ದೇಳು, ವಿಶ್ವಾತ್ಮ, ಹೇಡಿ ನೀನಲ್ಲ!
ಸೋಹಮೆನ್ನುತ ಏಳು! ಏಳು!
ಅಚಲಾತ್ಮ, ಎದ್ದೇಳು! ಏಳು!
ನಿದ್ದೆಯನು ಬಿಡು; ನುಗ್ಗು ನಡೆ ಮುಂದೆ, ಮುಂದೆ,
ಎದ್ದೇಳು! ಎದ್ದೇಳು! ಎದ್ದು ನಡೆ ಮುಂದೆ!
ವೇದಾಂತಕೇಸರಿಯೆ, ಗರ್ಜಿಸುತ ಹೋಗು;
ಘೋರ ವಿಪಿನಗಳೆಲ್ಲ ಕಂಪಿಸಲಿ, ಕೂಗು!
ಕಾಳನಿಶೆ ಕವಿದರೇನು?
ಕಾರ್ಮುಗಿಲು ಮುಸುಗಲೇನು?
ಮಿಂಚು ಥಳಿಸಲಿ, ಗರ್ಜಿಸಲಿ ಗುಡುಗು ಘೋರ;
ಧರೆಯ ತುಂಬಿದರೇನು ಕಾರ ಹಾಕಾರ?
ದಾರಿತೋರ್ಪುದು ನಿನ್ನ ನಯನಗಳ ಕಾಂತಿ;
ಹರುಷವೀವುದು ನಿನ್ನ ಹೃದಯದಾ ಶಾಂತಿ!
ಜನನ ಮರಣಾತೀತ ನೀನು;
ಹರ್ಷ ದುಃಖಾತೀತ ನೀನು;
ಅಳಿವಿಲ್ಲ; ಉಳಿವಿಲ್ಲ; ಬಾಳು ಬೇರಿಲ್ಲ;
ಉಂಟು ಇಲ್ಲೆಂಬುವಾ ಹಾಳು ಗೋಳಿಲ್ಲ!
ಧೀರಾತ್ಮ, ವೀರಾತ್ಮ, ನುಗ್ಗು ನಡೆ ಮುಂದೆ!
ಅಚಲಾತ್ಮ, ಅಮೃತಾತ್ಮ, ನಡೆ ಮುಂದೆ, ಮುಂದೆ!
ಗರ್ಜಿಸುತ ನಡೆ ಮುಂದೆ;
ನಿರ್ಭಯದಿ ನಡೆ ಮುಂದೆ!
ಎದ್ದೇಳು! ಎದ್ದೇಳು! ಏಳು! ನಡೆ ಮುಂದೆ!
ವೇದಾಂತಕೇಸರಿಯೆ, ನಡೆ ನುಗ್ಗು ಮುಂದೆ!

೨೩-೧೦-೧೯೨೬