ಮನೇ ಮನೇ ಮುದ್ದು ಮನೇ
ಮನೇ ಮನೇ ನನ್ನ ಮನೇ!

ತನ್ನ ತಾಯಿಯೊಲಿದ ಮನೆ,
ನನ್ನ ತಂದೆ ಬಳೆದ ಮನೆ;
ನನ್ನ ಗೆಳೆಯರೊಡನೆ ಕೂಡಿ,
ಮುದ್ದು ಮಾತುಗಳನು ಆಡಿ,
ಮಕ್ಕಳಾಟಗಳನು ಹೂಡಿ
ನಾನು ನಲಿದ ನನ್ನ ಮನೆ!

ನನ್ನ ಗಿರಿಜೆಯಿದ್ದ ಮನೆ,
ನನ್ನ ವಾಸುವಿದ್ದ ಮನೆ;
ಮನೆಯ ಮುತ್ತಿ ಬರಲು ಚಳಿ,
ಆಳು ಮಂಜ ಒಲೆಯ ಬಳಿ
ನಮ್ಮನೆಲ್ಲ ಕತೆಗಳಲಿ
ಕರಗಿಸಿದ್ದ ನನ್ನ ಮನೆ!

ತಾಯಿ ಮುತ್ತು ಕೊಟ್ಟ ಮನೆ,
ತಂದೆ ಎತ್ತಿಕೊಂಡ ಮನೆ;
ಮನೆಗೆ ಬಂದ ನೆಂಟರೆಲ್ಲ
ಕೂಗಿ ಕರೆದು ಕೊಬರಿ ಬೆಲ್ಲ
ಗಳನು ಕೊಟ್ಟು, ಸವಿಯ ಸೊಲ್ಲ
ನಾಡುತಿದ್ದ ನನ್ನ ಮನೆ!

ನಾನು ನುಡಿಯ ಕಲಿತ ಮನೆ,
ನಾನು ನಡಿಗೆಯರಿತ ಮನೆ;
ಹಕ್ಕಿ ಬಳಗ ಸುತ್ತ ಕೂಡಿ
ಬೈಗು ಬೆಳಗು ಹಾಡಿ ಹಾಡಿ
ಮಲೆಯನಾಡ ಸಗ್ಗ ಮಾಡಿ
ನಲಿಸುತಿದ್ದ ನನ್ನ ಮನೆ!

ನಾನು ಬಿದ್ದು ಎದ್ದ ಮನೆ,
ಮೊದಲು ಬೆಳಕು ಕಂಡ ಮನೆ;
ತಿಪ್ಪ ತಿಪ್ಪ ಹೆಜ್ಜೆಯಿಟ್ಟು,
ಬಿಸಿಲ ಕೋಲ ಹಿಡಿದು ಬಿಟ್ಟು,
ತಂಗಿ ತಮ್ಮರೊಡನೆ ಹಿಟ್ಟು
ತಿಂದು ಬೆಳೆದ ನನ್ನ ಮನೆ!

ಮೊದಲ ಮಿಂಚು ಹೊಳೆದ ಮನೆ,
ಮೊದಲ ಗುಡುಗು ಕೇಳ್ದ ಮನೆ;
ಮೊದಲ ಮಳೆಯು ಕರೆದು ಕರೆದು,
ಹೆಂಚಮೇಲೆ ಸದ್ದು ಹರಿದು,
ಮಾಡಿನಿಂದ ನೀರು ಸುರಿದು
ಬೆರಗನಿತ್ತ ನನ್ನ ಮನೆ!

ನನ್ನ ಐಗಳಿದ್ದ ಮನೆ,
ಮರಳು ತಿದ್ದಿ ಬರೆದ ಮನೆ;
ಬುವಿಯು ಕೊಟ್ಟ ಸಗ್ಗದಂತೆ,
ಬಂಧ ಕೊಟ್ಟ ಮುಕ್ತಿಯಂತೆ,
ದುಃಖ ಹೆತ್ತ ಸುಖಗಳಂತೆ
ತಿರೆಯ ಸಿರಿಯ ನನ್ನ ಮನೆ!

ಹೆತ್ತ ತಾಯಿ ಸತ್ತ ಮನೆ,
ಮತ್ತೆ ತಂದೆ ಹೋದ ಮನೆ;
ಗಿರಿಜೆ ನರಳಿ ಬಿಟ್ಟ ಮನೆ,
ವಾಸು ಬೆಂದು ಸಂದ ಮನೆ,
ಬಾಲ್ಯ ಬಾಡಿ ಬಿದ್ದ ಮನೆ,
ಆದರೆನಗೆ ನನ್ನ ಮನೆ!

ಕಬ್ಬಗಳನು ಕಂಡ ಮನೆ,
ಹಬ್ಬದೂಟ ಉಂಡ ಮನೆ;
ಅಜ್ಜಿ ಅಜ್ಜರೆಲ್ಲರಿದ್ದು,
ಕೆಳದಿ ಕೆಳೆಯರೆಲ್ಲರಿದ್ದು
ಬಾಳಿ ಬದುಕಿ ನರಳಿ ಬಿದ್ದು
ಮಾಯವಾದ ನನ್ನ ಮನೆ!

ನಾನು ಬಾಳುತಿರುವ ಮನೆ,
ತಮ್ಮ ತಿಮ್ಮು ಇರುವ ಮನೆ;
ತಂಗಿ ಬಂದು ಹೋಗುತಿರುವ,
ಹಕ್ಕಿ ಬಳಗ ಹಾಡುತಿರುವ,
ಕಾಡು ಮುತ್ತು ಕೊಡುತಲಿರುವ
ಸೊಬಗುವೀಡು ನನ್ನ ಮನೆ!

ಹಳ್ಳಿರಂಗನಿರುವ ಮನೆ,
ಬಳ್ಳಿ ಸಿಂಗರಿಸುವ ಮನೆ;
ಬಾವಿಕಟ್ಟೆ ಬಳಿಯೊಳಂದು,
ತಾಯಿತಂದೆ ಬಳಗ ಮಿಂದು
ನಿಲಲು, ನೆಳಲ ನೀಡಿದೊಂದು
ತೆಂಗು ಇರುವ ನನ್ನ ಮನೆ!

ಹಿರಗ ಕೊಳಲ ನುಡಿದ ಮನೆ,
ಹಣ್ಣು ತಂದು ಕೊಟ್ಟ ಮನೆ;
ತುರುಗಳೆಲ್ಲ ‘ಅಂಬ’ ಎಂದು,
ಕರುಗಳನ್ನು ಕರೆದು ಬಂದು,
ಒಂದು ದಿನವು ಕಳೆಯಿತೆಂದು
ಎಚ್ಚರಿಸಿದ ನನ್ನ ಮನೆ!

ತಾಯಿ ಮಿಂದ ಕೆರೆಯ ಮನೆ,
ಬಟ್ಟೆಯೊಗೆದ ತೊರೆಯ ಮನೆ;
ತಾಯಿಯಡಿಯ ದೂಳಿಯಿಂದ,
ತಂದೆಯುತ್ತ ಮಣ್ಣಿನಿಂದ,
ಗಿರಿಜೆ ಬಿದ್ದ ಮಟ್ಟಿಯಿಂದ,
ಮಂಗಳಾದ ನನ್ನ ಮನೆ!

ನಾನು ಬದುಕೊಳುಳಿವ ಮನೆ,
ನಾನು ಬಾಳಿಯಳಿವ ಮನೆ;
ನನ್ನದಲ್ಲದಿಳೆಯೊಳಿಂದು,
ಹೆಮ್ಮೆಯಿಂದ ನನ್ನದೆಂದು,
ಬೆಂದು ಬಳಲಿದಾಗ ಬಂದು
ನೀರು ಕುಡಿವ ನನ್ನ ಮನೆ!

೨೭-೧೦-೧೯೨೭