ನಾನಾಡುವುದ ನೋಡಿ ನೀ ನಲಿವೆ, ಜನನಿ;
ನೀ ನೋಡುವುದ ನೋಡಿಯೇ ನಾ ನಲಿವೆನು!
ನಾನಾಡುವಾಗ ನೀ ನೋಡುವುದ ಮರೆವೆ,
ನೀ ನೋಡುವಾಗ ನಾನಾಡುವುದ ಮರೆವೆ!
ಆದ್ಯಂತವಿಲ್ಲದೀ ಆಟವೇನಮ್ಮ?
ನಾ ಬಳಲೆ, ನೀ ಬಳಲೆ, ಬಳಲಿದನು ಬೊಮ್ಮ!
ಎಂದಿನಿಂದಾರಂಭವಾಗಿಹುದು ಆಟ?
ಇಂದಿಗೂ ಮುಗಿಯದಿದೆ ಈ ನಿನ್ನ ನೋಟ!
ಅಗಣಿತ ಪ್ರಳಯಗಳು ಜಾರಿದುವು, ತಾಯೆ,
ಮುಗಿಯದಿದೆ ನಮ್ಮಾಟವಿದು ಯಾರ ಮಾಯೆ?
Leave A Comment