ಯಾವ ದೇವಶಿಲ್ಪಿಯಿಂತು
ನಿನ್ನ ಕೊರೆದನು?
ಯಾವ ಬಣ್ಣಗಾರನಿಂತು
ರಂಗನೆರೆದನು?
ಒಲವಿನೊಡೆಯ ಸೊಬಗಿನೊಡೆಯ-
ನೊಡನೆ ಕೂಡಿ ಸಂಚುಮಾಡಿ
ನಿನ್ನ ಪಡೆದನೆ?
ಮಳೆಯಬಿಲ್ಲ ಕರಗಿಸಿಂತು
ನಿನ್ನ ಕಡೆದನೆ?

ಒಲುಮೆಗಿರುವ ಕಣ್ಣುಗಳನು
ಸುಲಿಗೆಮಾಡಿಹೆ.
ಅವುಗಳನ್ನು ಪುಕ್ಕದಲ್ಲಿ
ಕೆತ್ತಿ ಹೂಡಿಹೆ!
ಸಗ್ಗದಂಗನೆಯರ ಸಂಗ
ಮಾಡಿ ಸೆಜ್ಜೆಯಿಂದ ಗೆಜ್ಜೆ
ಗಳನು ಕದ್ದಿಹೆ.
ಅವರ ಹೆಜ್ಜೆಯಿಡುವ ಬಿಜ್ಜೆ-
ಗೋಜಳಿದ್ದಿಹೆ!

೨೦-೯-೧೯೨೭