ಕೈಬಿಟ್ಟರೆ ನೀ ಗತಿಯಾರೈ?
ಕಿರುದೋಣಿಯಿದು ಮುಳುಗದೇನೈ?
ಮೇರೆಯನರಿಯದ ಕಡಲಿದು, ಗುರುವೆ,
ಭೋರೆಂದಲೆಗಳು ಏಳುತಿವೆ;
ನೊರೆನೊರೆಯಾಗಿಹ ತೆರೆತೆರೆಯಲ್ಲಿ
ಮೃತ್ಯುವು ನೃತ್ಯವ ಮಾಡುತಿದೆ!
ಉತ್ತರಮುಖಿಯು ಪುಡಿಪುಡಿಯಾಗಿದೆ!
ಗಾಳಿಯು! ಮೋಡವು! ಮಿಂಚುತಿದೆ!
ಕತ್ತಲು ಕವಿದಿದೆ, ಚಿತ್ತವದಳುಕಿದೆ,
ಕಾಣದು ಕಣ್ಣಿಗೆ ಧ್ರುವತಾರೆ!
ಹರಿದಿದೆ ಕಟ್ಟು, ಮುರಿದಿದೆ ಹುಟ್ಟು,
ಬಳಲಿಹೆ, ಬೆದರಿಹೆ ಕಂಗೆಟ್ಟು!
ಸೋದರರನಿಬರು ಮುಳುಗಿದ ಚಿಹ್ನೆಯ
ಬರಿಯ ದೋಣಿಗಳು ತೋರುತಿವೆ!
೨೧-೧೨-೧೯೨೮
Leave A Comment