ದೇಹವಿದು ನೀನಿರುವ ಗುಡಿಯೆಂದು ತಿಳಿದು
ಗುಡಿಸುವೆನು ದಿನದಿನವು, ದೇವದೇವ;
ಬುದ್ಧಿಯಿದು ಗುಡಿಯೊಳುರಿಯುವ ದೀಪವೆಂದು
ಅಮಲ ಚಿಂತೆಯ ತೈಲವನು ತುಂಬುವೆ.

ಎದೆಯ ಕಮಲಾಕರದಿ ನೀನು ಮೀಯುವೆ ಎಂದು
ಕಂಬನಿಯ ನವಜಲದಿ ದಿನವು ತೊಳೆವೆ;
ಇರುಳು ಕವಿಯದ ತೆರದಿ ರವಿಯ ಬೆಳಕನು ಕರೆವೆ,
ಮನದ ಬಾಗಿಲ ತೆರೆವೆ; ಮುಚ್ಚದಿರುವೆ.

ಎನ್ನ ಕರ್ಮದ ಹಣ್ಣುಗಳ ಕೊಯ್ದು ತರುವೆ,
ಸುಖದುಃಖಗಳನೆಲ್ಲ ಆಯ್ದು ತರುವೆ;
ಕಣ್ಣು ಕಿವಿ ಮೂಗು ಬಾಯಿಂದ್ರಿಯಂಗಳು ದುಡಿದ
ಹೂವುಗಳ ಮಾಲೆಯನು ನೆಯ್ದು ಬರುವೆ.

ಗಂಟೆಗಳ ನಾ ಹೊಡೆಯೆ, ಶಂಖವನು ನಾನೂದೆ,
ಮಂಗಳಾರತಿಯ ನಾ ಬೆಳಗಲರಿಯೆ;
ನಿನ್ನ ಸಂಗವ ತೊರೆಯೆ, ನಿನ್ನನೆಂದೂ ಮರೆಯೆ,
ನಿನ್ನವನು ನಾನಲ್ಲವೇನೊ, ದೊರೆಯೆ!

೧೦-೩-೧೯೨೮