ಕೇಳಿ, ಕೇಳಿ, ಗೆಳೆಯರೇ,
ದಿವ್ಯಮಂತ್ರಘೋಷವ!
ಏಳಿ, ಏಳಿ, ಬೇಗನೆ,
ಜಗದ ಗುಡಿಗೆ ಪೋಗುವ!

ಶಶಿಯು ರವಿಯು ತಾರಕೆಗಳು ದೀಪವಾಗಲಿ;
ಕಾನನಗಳು ವಿಕಸಿತ ಸುಮ ಮಾಲೆಯಾಗಲಿ;
ಮೇಲೆ ನಲಿವ ನೀಲಗಗನ ಗೋಪುರಾಗಲಿ;
ಕಡಲು ತೊರೆ ತಟಾಕ ಪಂಚಪಾತ್ರೆಯಾಗಲಿ;
ಜಲತರಂಗ ಚಾರುಧಾರೆ ತೀರ್ಥವಾಗಲಿ,
ದಿವ್ಯಪುಷ್ಪಗಂಧವೆಮ್ಮ ಧೂಪವಾಗಲಿ;
ಕೋಕಿಲಾದಿ ವಿಹಗ ಗೀತ ವಾದ್ಯವಾಗಲಿ,
ಹೃದಯ ಪ್ರೇಮವೆಮ್ಮ ಧರ್ಮಶಾಸ್ತ್ರವಾಗಲಿ;
ಭಕ್ತಿಯೆಮ್ಮ ದಿವ್ಯ ಅತ್ಮಯಜ್ಞವಾಗಲಿ,
ಬ್ರಹ್ಮಯಜ್ಞಶಾಲೆ ಹೃದಯಪೀಠವಾಗಲಿ.

ಕೇಳಿ! ಕೇಳಿ, ಗೆಳೆಯರೇ!
ದಿವ್ಯಮಂತ್ರಘೋಷವ!
ಏಳಿ! ಏಳಿ ಬೇಗನೆ!
ಜಗದ ಗುಡಿಗೆ ಪೋಗುವ!