ನಿನ್ನ ಬಾಂದಳದಂತೆ
ನನ್ನ ಮನವಿರಲಿ;
ನಿನ್ನ ಸಾಗರದಂತೆ
ನನ್ನ ಎದೆಯಿರಲಿ.

ನಿನ್ನ ಸುಗ್ಗಿಯ ತೆರದಿ
ನನ್ನ ಸೊಬಗಿರಲಿ;
ನಿನ್ನ ಲೀಲೆಯ ತೆರದಿ
ನನ್ನ ಬಾಳಿರಲಿ.

ನಿನ್ನ ಬಲವಿರುವಂತೆ
ನನ್ನ ಬಲವಿರಲಿ;
ನಿನ್ನ ತಿಳಿವಿರುವಂತೆ
ನನ್ನ ತಿಳಿವಿರಲಿ.

ನಿನ್ನೊಲ್ಮೆಯಂದದಲಿ
ನನ್ನೊಲ್ಮೆಯಿರಲಿ;
ನಿನ್ನಾಳವೆನಗಿರಲಿ
ನೀನೆ ನನಗಿರಲಿ;

ನಿನ್ನಾತ್ಮದಾನಂದ
ನನ್ನದಾಗಿರಲಿ;
ನಿನ್ನೊಳಿರುವಾ ಶಾಂತಿ
ನನ್ನೆದೆಗೆ ಬರಲಿ.

೨೭-೮-೧೯೨೮