ಬಡವನೆಂದುಸುರಲತಿನಾಚುವೆನು, ದೇವ,
ಪೊಡವಿಗಧಿಪತಿ ನೀನೆ ಹೃದಯದೊಳಗಿರಲು.

ನಿನಗಿಲ್ಲದಾ ಸುಖವನೆನಗೆ ದಯಪಾಲಿಸಿಹೆ,
ನಿನಗಿಲ್ಲದಾನಂದವೆನಗಿರುವುದು!
ನಿನ್ನ ಮೋಕ್ಷದ ಬಂಧವೆನಗಿಲ್ಲ, ಹೇ ದೇವ,
ಎನ್ನ ಪಾಶದ ಮೋಕ್ಷ ನಿನಗಿಲ್ಲವು!

ಮಾಯೆಯೊಳಗಲೆವ ಸುಖ ನಿನಗಿಲ್ಲ, ಎನಗಿಹುದು;
“ಮಾಯೆಯಧಿಪತಿಯೆ ಬಾ ರಕ್ಷಿಸೆಂ”ದು
ಬಾಯಬಿಟ್ಟೊರಲುವಾನಂದ ನಿನಗೆಲ್ಲಿಹುದು?
ನಿನ್ನಿರವ ಕಂಡೆನಗೆ ದುಃಖವಹುದು!

ಗುಣ ಸುಖಗಳಿಲ್ಲ; ನೀನದು ಅಲ್ಲ, ಇದು ಅಲ್ಲ;
ನಿನ್ನ ಬಾಳೆಂಬುದದು “ನೇತಿ! ನೇತಿ!”
ನಿನಗಂತು ತತ್ತ್ವಜ್ಞರಿಂದ ಉಳಿಗತಿಯಿಲ್ಲ;
ನನಗಾದರವರ ಭಯವಿನಿತಿಲ್ಲವು!