ಇದೆ ಎನ್ನ ಬಿನ್ನಹ ನಿನಗೆನ್ನ ತಾಯೆ:
ದಯಪಾಲಿಸಮ್ಮಾ ಜಗದಂಬೆ ಮಾಯೆ!

ಬಿರುಗಾಳಿ ಮಳೆಯೊಳು ಬಗ್ಗಡವಾಗದೆ
ಮಾಗಿಯ ಚಳಿಯೊಳು ಘನಹಿಮವಾಗದೆ
ಬಾಳಿನ ಹೊನಲು ಬ್ರಹ್ಮಾಂಬುಧಿಗೆ
ನಿರಂತರವಾಗಿ ಹರಿಯಲಿ ಸದಾ.

ಗರ್ವಕೆ ಮಣಿಯದೆ, ದೀನರ ತುಳಿಯದೆ,
ಸಿರಿಯಧಿಕಾರಗಳಾಸೆಗೆ ಸಿಲುಕಿ
ಶಿವ ಸತ್ಯ ಸೌಂದರಗಳನೆಲ್ಲ ಹಳಿಯದೆ
ಜೀವವು ಹೂವಿನೊಳಿರಲಿ ಸದಾ.

ಧರ್ಮವ ಬಿಸುಟು, ಕರ್ಮಕೆ ಬೆದರಿ,
ಸಂಗಾತಿಗಳನು ಬಿಟ್ಟೋಡಿಹೋಗದೆ,
ಅವರೆಡರೆಲ್ಲವನಾನಂದದಿಂದ
ಹೊರುವಂಥ ಮನವೆನಗಿರಲಿ ಸದಾ.

ಬಾಳನು ಬೈಯದೆ, ಎದೆಗುಂದದಳದೆ,
ಭೂಮಿಯು ನಿನ್ನ ಮಡಿಲೆಂದು ತಿಳಿದು
ಋತದಿಂದ ಬಾಳಿ ಮೃತ್ಯುವನಣಕಿಪ
ಶಾಂತಿಯ ಬಲವೆನಗಿರಲಿ ಸದಾ.

೨೭-೬-೧೯೨೭