ಭಾರತಾಂಬೆಯೆ, ಜನಿಸಿ ನಿನ್ನೊಳು ಧನ್ಯನಾದೆನು, ದೇವಿಯೇ.
ನಿನ್ನ ಪ್ರೇಮದಿ ಬೆಳೆದು ಜೀವವು ಮಾನ್ಯವಾದುದು, ತಾಯಿಯೆ.

ರಾಣಿಯಂದದಿ ಮೆರೆಯೆ ಸಿರಿತನವಿಹುದೊ ಏನೋ ಅರಿಯೆನು;
ಕಾಮಧೇನುವಿನಂತೆ ಬಯಸಿದ ಫಲವ ಕೊಡುವೆಯೊ ಅರಿಯೆನು;
ಎನ್ನ ಅಂಗಗಳೆಲ್ಲವು ನಿನ್ನ ಸೊಂಪನು ಬಲ್ಲವು;
ನಿನ್ನ ಸಂಗವೆ ಪರಮಮಂಗಳವೆಂಬುದಿನಿತನು ಮರೆಯೆನು!

ಕುಂದುಕೊರತೆಗಳಿಹವು ನಿನ್ನೊಳು ಎಂಬುವಳಲನು ಬಲ್ಲೆನು,
ಹಿಂದಕುಳಿದವಳೆಂಬ ನಿಂದೆಯ ಸಹಿಸಿ ನೊಂದಿಹೆ ಬಲ್ಲೆನು;
ಆದರೊಲಿಯೆನು ಅನ್ಯರ, ಚಿನ್ನವೊಲಿದಿಹ ಧನ್ಯರ;
ಕುಂದುಕೊರತೆಗಳಿರಲಿ, ಮಹಿಮಳು ನೀನೆ, ಅನ್ಯರನೊಲ್ಲೆನು.

ನಿನ್ನ ಕಂಗಳ ಪುಣ್ಯಕಾಂತಿಯೊಳೆನ್ನ ಕಂಗಳ ತೆರೆದೆನು;
ನಿನ್ನ ಅಂಕದ ಮಂಗಳಾಂಗಣದಲ್ಲಿ ನಲಿಯುತ ಮೆರೆದೆನು;
ನಿನ್ನ ಮೈಮೆಯ ಬರೆವೆನು; ನಿನ್ನ ಹೆಸರನೆ ಕರೆವೆನು;
ನಿನ್ನ ಸೇವೆಯೊಳಳಿವ ಭಾಗ್ಯಕೆ ಸಕಲ ಭಾಗ್ಯವ ತೊರೆವೆನು!

೨೮-೪-೧೯೨೭