ನಿನ್ನ ಕಾಣುವ ಮುನ್ನ
ಕೊಳಲೂದುತಿದ್ದೆ;
ನೀನು ಸುಂದರಳೆಂದು
ಭಾವಿಸಿದ್ದೆ.

ನಿನ್ನ ನೋಡಲು ಕಾಳಿ
ಎಲೆ ತಾಯೆ, ಮಾರಿ,
ಕನಸೊಡೆದು ಸುರಿದುದೌ
ಗಾನವಾರಿ.

ಕಾಳ ಜನನಿಯ ನೋಡಿ
ಕೈಯಿಂದ ಜಾರಿ
ಸಿಡಿದೊಡೆದ ಕೊಳಲಾಯ್ತು
ರಣದ ಭೇರಿ.

ಗೆಲುವಿನುಲಿಯಳಿದುದೌ
ಬಲುಮೆಯುಲಿಯಾಗಿ;
ಮೊಳಗಿದುದು ಕೊಳಲು ರಣ
ಭೇರಿಯಾಗಿ.

ಕೊಳಲ ಕೇಳಿದ ಜನರು
ಭೇರಿಯನು ಕೇಳಿ
ಬೆರಗಾಗಿ ನಿಂತರೌ
ಮರುಕ ತಾಳಿ.

ಕಾಳಿ ಕುಣಿವರೆ ಬೇಕು,
ಕೊಳಲಲ್ಲಿ, ಭೇರಿ!
ನಿನ್ನ ನರ್ತನವೆಲ್ಲಿ?
ಕೊಳಲದೆಲ್ಲಿ?

೨೪-೭-೧೯೨೭