ಕಣ್ಣನು ತಿವಿಯುವ ಕಗ್ಗತ್ತಲು ಕವಿ
ದಿದ್ದಿತು; ಇದ್ದುವು
ವನಗಳು ಗಾಢ ಸುಷುಪ್ತಿಯಲಿ.
ಮೌನವು ಶಾಂತಿಯ ಮಡಿಲೊಳಗಿದ್ದಿತು;
ಭೇದವ ನೀಗಿ
ಅತೀತವಾಗಿ
ಕತ್ತಲೊಳೆಲ್ಲವು ಲಯವಾಗಿ
ಇಹಪರವೆರಡೂ ಒಂದಾಗಿ
ವಿಶ್ವವೆ ಗೂಢ ಸಮಾಧಿಯ ಸೇರಿ
ಇದ್ದಿತು ಧ್ಯಾನಾನಂದವ ತೋರಿ.

ಮೇರೆಯೆ ಇಲ್ಲದ ಕತ್ತಲ ಕಡಲೊಳು
ಮಿಣುಕಿ ಮಿಣುಕಿ
ಮಿಂಚಿನ ಹನಿಗಳ ಮಳೆಯಂತೆ
ಹೊನ್ನೆಯ ಹುಳುಗಳು, ಕಾಂತಿಯ ಕಿಡಿಗಳು
ಹೊಳೆದು, ಅಳಿದು,
ಅಳಿದು, ಹೊಳೆದು,
ಚಿಮ್ಮುತ ಎಲೆಯಿಂದೆಲೆಯೆಡೆಗೆ
ಚಿಮುಕಿಸಿ ಮೋಹವನಡಿಗಡಿಗೆ
ಕುಣಿಯುತ ಮಿಣುಕುತ ಮನಸನು ಸೆಳೆದು
ಮೆರೆದುವು ಬೆಳಕಿನ ಮಣಿಗಳು ಹೊಳೆದು.

ಮಸಿಮಯ ನಭದೊಳು ಚುಕ್ಕಿಗಳೆಸೆದುವು;
ಜೋತಿಯ ಸೇಸೆಗ
ಳವುಗಳನಣಕಿಸಿ ಮಿಣುಕಿದುವು;
ಕೊಳದೆದೆಯೊಳು ಮರುಬಿಂಬಿಸಿ ಮಿಣುಕುತ
ಇಮ್ಮಡಿಯಾಗಿ
ಅಗಣಿತವಾಗಿ
ಕುಸುಮಿತ ಮಿಂಚಿನ ಲತೆಯಿಂದ
ಉದುರುವ ಸುಮಗಳ ತೆರದಿಂದ
ಗಡಿಪಾರಾದುಡುಗಣ ದಳದಂತೆ
ಹೊಳೆದುದು ಹೊನ್ನೆಯ ಹುಳುಗಳ ಸಂತೆ.

ಎವೆಯನು ಮುಚ್ಚದೆ, ಚಲಿಸದೆ, ಸುಮ್ಮನೆ
ನೋಡಿದೆ; ನೋಡಿದೆ
ಮಹಿಮೆಯ ನೋಟವ ಮೈಮರೆತು:
ಕವಿತಾವೇಶಾನಂದದ ಲಹರಿಯು
ಚಿತ್ತದಿ ಮೊರೆದು
ಎದೆಯೊಳು ಹರಿದು
ಕರಗಿಸಿತೆನ್ನೀ ವ್ಯಕ್ತಿಯನು;
ದೊರಕಿಸಿತೆನಗಾ ಮುಕ್ತಿಯನು:
ಮೋಹದ ನೋಟದೊಳಾನೊಂದಾಗಿ
ಮಿಣುಮಿಣುಕಿದೆ ಮಿಂಚಿನ ಹುಳುವಾಗಿ!

೧೪-೭-೧೯೨೭