ಮೊದಲನರಿಯದಾದಿಯಿಂದ
ಆದಿ ತಿಮಿರದುದರದಿಂದ
ಮೂಡಿ ಬಂದೆನು;
ಯಾರ ಬಯಕೆ ಎಂಬುದರಿಯೆ;
ಏಕೆ ಎಲ್ಲಿಗೆಂಬುದರಿಯೆ;
ಮುಂದೆ ಹರಿಯುವೆ!

ಮಲಗಿ ಕಲ್ಲು ಮಣ್ಣುಗಳಲಿ,
ಜಡ ಸುಷುಪ್ತಿಯಲ್ಲಿ ಬಳಲಿ
ಯುಗಗಳಾದುವು!
ಸಸ್ಯಗಳಲಿ ಕನಸ ಕಂಡು,
ಹುಟ್ಟು ಬಾಳು ಸಾವನುಂಡು
ಕಲ್ಪ ಹೋದುವು!

ಮರಳಿ ಮೈಯ ತಿಳಿದು ತಿರುಗಿ
ಮಿಗಗಳಂತೆ ಮೂಡಿ ಮರುಗಿ
ಬಹಳ ಬಳಲಿದೆ.
ಇಂದು ಮನುಜ ಜನ್ಮದಲ್ಲಿ
ಬಂದು ಹಾಡುತಿರುವೆನಿಲ್ಲಿ!
ಮುಂದಕೆಲ್ಲಿಗೆ?

೨೦-೧-೧೯೨೯