ಶ್ರೀಮಾನ್ ಪುಟ್ಟಪ್ಪನವರ ‘ಕೊಳಲಿ’ಗೆ ಮುನ್ನುಡಿ ನುಡಿಯುವುದು ನನಗೊಂದು ಹೆಮ್ಮೆಯ ವಿಷಯ.

ಕನ್ನಡ ಕಾವ್ಯದ ಹೊಲವನ್ನು ಹೊಸ ರೀತಿಯಲ್ಲಿ ಉತ್ತು ಬೆಳೆ ಮಾಡಬೇಕೆಂದು ಪ್ರಯತ್ನಪಡುತ್ತಿರುವವರಲ್ಲಿ ಶ್ರೀ ಪುಟ್ಟಪ್ಪನವರ ಸಾಧನೆ ಸ್ತೋತ್ರಾರ್ಹವಾದದು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಇವರು ವಿದ್ಯಾರ್ಥಿ ಕವಿ ಸಮ್ಮೇಳನಕ್ಕೆ ಅಧ್ಯಕ್ಷರಾದರು. ಈಗ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಬೋಧಕರಾಗಿ ತಮ್ಮ ಉತ್ಸಾಹವನ್ನು ಕಿರಿಯರಲ್ಲಿ ತುಂಬುತ್ತಿರುವರು. ಶ್ರೀಮನ್ ಮಹಾರಾಜರವರ ಜೂಬಿಲಿ ಮಹೋತ್ಸವದಲ್ಲಿ ತಮ್ಮ ರಾಜಭಕ್ತಿಯನ್ನೂ, ದೇಶಭಕ್ತಿಯನ್ನೂ ‘ಬೆಳ್ಳಿಯಹಬ್ಬದ ಕಬ್ಬದ ಬಳ್ಳಿ’ ಎಂಬ ಗೀತದಲ್ಲಿ ಪ್ರಕಟಿಸಿರುತ್ತಾರೆ. ಇವರ ‘ಬೊಮ್ಮನಹಳ್ಳಿ ಕಿಂದರಿ ಜೋಗಿ’ಗೆ ಮರುಳಾಗದ ಮಕ್ಕಳೇ ಇಲ್ಲ. ‘ಯಮನ ಸೋಲು,’ ‘ಜಲಗಾರ,’ ‘ಚಂದ್ರಹಾಸ,’ ‘ಬಿರುಗಾಳಿ’ ಮುಂತಾದ ನಾಟಕಗಳು ವಿಧ ವಿಧ ಪ್ರಯತ್ನ ಪರೀಕ್ಷೆಗಳಿಗೆ ಸಾಕ್ಷಿಯಾಗಿವೆ. ಇವರ ಕವನಗಳನ್ನು ಸರಸ್ವತೀ ದೇವಿಯೇ ನುಡಿಸುತ್ತಿರುವಳೆಂಬುದರಲ್ಲಿ ಸಂದೇಹವಿಲ್ಲ.

ಕವಿತ್ವ ಮಾಡುವ ಕುತೂಹಲದಿಂದ ಗ್ರಂಥಗಳನ್ನು ತಡಕಿ, ಲಕ್ಷಣಗಳನ್ನು ಕತ್ತು ಹಿಸುಕಿ, ಹತ್ತು ದಿಕ್ಕುಗಳನ್ನೂ ನೋಡುತ್ತ ಕ್ಲೇಶಪಡುತ್ತಿದ್ದ ತನಗೆ ವಾಗ್ದೇವಿ ಬಂದು ‘ಹುಚ್ಚ ನಿನ್ನ ಹೃದಯದಲ್ಲಿ ನೋಡಿ ಬರೆ’ ಎಂಬುದಾಗಿ ಉಪದೇಶಿಸಿದಳೆಂದು ಒಬ್ಬ ಇಂಗ್ಲಿಷ್ ಕವಿ ಹೇಳಿರುತ್ತಾನೆ. ಅದೇ ರಹಸ್ಯವನ್ನು ಮತ್ತೊಬ್ಬ ಇಂಗ್ಲಿಷ್ ಕವಿ ‘ಹೃದಯದಿಂದ ಬರುವುದು ಯಾವುದೋ, ಅದೇ ಹೃದಯಕ್ಕೆ ಹೋಗುವುದು’ ಎಂಬುದಾಗಿ ಸಾರಿದ್ದಾನೆ. ಇವರು ಹುಟ್ಟಿ ಬೆಳೆದಿದ್ದು ಶಿವಮೊಗ್ಗೆಯ ಮಲೆನಾಡಿನ ಒಕ್ಕಲು ಮಕ್ಕಳ ಕುಲದಲ್ಲಿ; ಇವರ ವಾಸ, ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ; ಉದ್ಯೋಗ, ಕಾವ್ಯಪ್ರಿಯರೊಡನೆ ಕವಿತಾಪ್ರಸಾದವನ್ನು ಸವಿಯುವುದರಲ್ಲಿ. ಜೀವಾನಂದ, ಕಾವ್ಯಾನಂದ, ಬ್ರಹ್ಮಾನಂದಗಳನ್ನು ತಮ್ಮ ಶಕ್ತಿಗನುಗುಣವಾಗಿ ಅಂತಃಕರಣದಲ್ಲಿ ತುಂಬಿಕೊಳ್ಳುತ್ತಾ ಹಕ್ಕಿ ಹಾಡಿದಂತೆ ಸುಖವಾಗಿ ಹಾಡುವರು ಪುಟ್ಟಪ್ಪನವರು. ಇವರ ತಿರುಳುಗನ್ನಡದ ನುಡಿಗಳು, ಇಂಪಾದ ಹೊಸಹೊಸ ಮುದ್ದು ಪದ್ಯಗಳು, ಸರಳ ಶೈಲಿ, ಭಾವೋದ್ರೇಕ, ಗೀತಪ್ರವಾಹ, ಇವುಗಳ ಹೊಡೆತದಲ್ಲಿ ಏನಾದರೂ ತಪ್ಪುಗಳು ಒಂದುವೇಳೆ ಬಿದ್ದಿದ್ದರೂ ಅವು ಕಾಣದಂತೆ ಮುಚ್ಚಿಹೋಗುವುವು. ನೂರು ದೋಷಗಳಿದ್ದರೂ ಜೀವವಿದ್ದರೆ ಕಾವ್ಯ ಕಾವ್ಯವೇ. ಒಂದು ತಪ್ಪಿಲ್ಲದಿದ್ದರೂ ಜೀವವಿಲ್ಲದ ಕಾವ್ಯ ಕಾವ್ಯವೇ ಅಲ್ಲ. ಪುಟ್ಟಪ್ಪನವರ ಉತ್ತಮ ಕವನಗಳಲ್ಲಿ ಈ ಜೀವವಿದೆ: ಆತ್ಮವಿದೆ: ಇರುವುದರಿಂದ ಅಮೃತತ್ವದ ಸಾರವಿದೆ.

ಸಣ್ಣ ವಯಸ್ಸಿನಲ್ಲಿಯೇ ಪುಟ್ಟಪ್ಪನವರ ಕೀರ್ತಿಲತೆ ಕನ್ನಡನಾಡಿನಲ್ಲೆಲ್ಲಾ ಹಬ್ಬಿಕೊಂಡಿರುವುದು. ಅವರ ಕಾವ್ಯದ ಬಳ್ಳಿ ಕುಡಿ ಹೊಮ್ಮಿ ಹೂವಾದದ್ದು, ಬಲಿಯುತ ಬಲಿಯುತ ಉತ್ಕೃಷ್ಟವಾದ ಫಲಗಳನ್ನು ಬಿಡುವುದೆಂದು ಅವರನ್ನು ಬಲ್ಲವರೆಲ್ಲರ ನಂಬಿಕೆ ಮತ್ತು ಹಾರೈಕೆ. ಅವರ ಜೀವರಥೋತ್ಸವ ಸುಪಥವಾಗಿ ನಡೆಯಲಿ.

ಬಿ.ಎಂ. ಶ್ರೀಕಂಠಯ್ಯ
ಮೈಸೂರು
ತಾ|| ೭-೧-೧೯೩೦