ಮಳೆಯಿಳಿದು ನಿಂತಿಹುದು: ಹೊಸ ಕಂಪು ಹೊಸ ತಂಪು ಹೊಸ ಸೊಂಪು ಹೊಸ ಪೆಂಪು ತೋರುತಿಹುದು; ಬಯಲಿಗಾಶಿಸಿ ಎದೆಯು ಹಾರುತಿಹುದು! ತಂಗಾಳಿ ಬೀಸುತಿದೆ; ಕೋಗಿಲೆಯು ಕೂಗುತಿದೆ; ಬೈಗುಗೆಂಪಂಬರದಿ ರಂಜಿಸಿಹುದು; ತಿರೆಯೆಲ್ಲವಂ ಸಂಜೆ ಮೋಹಿಸಿಹುದು! ಬೈಗುಗೆಂಪೋಕುಳಿಯ ತೆರೆತೆರೆಗೆ ಹರಡಿಹುದು; ಹಸುರು ತಲೆದೂಗುವುದು ಕೆರೆಯಂಚಲಿ: ಗೂಡ ಬಿಡು, ಬಾ ಹೊರಗೆ, “ಗೀತೆ”ಯಿರಲಿ! ಬಿದಿರಮೆಳೆಯಲಿ ಗಾಳಿ ತವರೂರ ಕತೆಗಳನು ಮೊರೆಯುತ್ತಲಲೆಯುತ್ತ ಸುಳಿಸುಳಿವುದು! ಸೊಬಗಿನಲಿ “ಗೀತೆ”ಯನು ಮತಿ ತಿಳಿವುದು! ಮೋಡಗಳ ಸಿರಿಗೆಂಪು ಪಂಡಿತರ ಪಾಂಡಿತ್ಯ ವೆಲ್ಲಮಂ ಬೋಧಿಪುದು; ಮೀರಿರುವುದು! ಸೊಬಗಿನಲಿ ಶಿವನೆಂದು ಸಾರುತಿಹುದು! ನಿರತೆಯಂಬುಧಿಯಲ್ಲಿ ಮುಳುಗು ಬಾ, ತೇಲು ಬಾ, ಕರಗು ಬಾ; ಬಾ ನೋಡು ಪರಮಾತ್ಮನಂ! ಬಾ, ಹೊರಗೆ; ಗೂಡ ಬಿಡು, ಬಾ, ಬೇಗ ಬಾ! ೧೪-೭-೧೯೨೮