ಸೋದರಿಯರೆ ನೀವೆಲ್ಲರು ಬನ್ನಿ,
ಮೇದಿನಿಗೊಯ್ಯುವ ಮೋದವ ತನ್ನಿ;
ಮಧುಮಾಸದ ಮೋಡದ ಮೇಲೇರಿ,
ಮುದದಿಂ ಪ್ರೇಮವಿಲಾಸವ ಬೀರಿ;
ಮಧುರಾಜನ ಪಾಳೆಯವನು ಸೇರಿ,
ವಿಧವಿಧ ರಾಗದ ಹೂಗಳ ಹೇರಿ;
ಸೋದರಿಯರೆ ನೀವೆಲ್ಲರು ಬನ್ನಿ,
ಮೇದಿನಿಗೊಯ್ಯುವ ಮೋದವ ತನ್ನಿ!

ಕೋಕಿಲ ಕಂಠದ ಕೊಳಲನು ಸೇರಿ
ಲೋಕಗಳೊಡೆಯನ ಮಹಿಮೆಯ ಸಾರಿ;
ತಿಳಿಗೊಳದೊಳು ಜಲಲೀಲೆಯನಾಡಿ
ಬಳಲಿದ ಮನುಜರಿಗೊಲುಮೆಯ ನೀಡಿ;
ಗಳಗಳರವದಿಂ ತೊರೆಯಾಗೋಡಿ
ಬಳುಕಿ ನಲಿದು ಸುರಗಾನವ ಹಾಡಿ;
ಸೋದರಿಯರೆ ನೀವೆಲ್ಲರು ಬನ್ನಿ,
ಮೇದಿನಿಗೊಯ್ಯುವ ಮೋದವ ತನ್ನಿ!

ಪಲ್ಲವಿತ ವನದಿ ಮಲ್ಲಿಗೆಯಾಗಿ
ಉಲ್ಲಸವನು ತೋರಿರಿ ತಲೆದೂಗಿ;
ಚಂಪಕ ವನದೊಳು ಸಂಪಗೆಯಾಗಿ
ಕಂಪಿಂ ಮರಿಗೋಗಿಲೆಯನು ಕೂಗಿ;
ತರುಲತೆ ಹೂಗಳ ಹೃದಯವ ಸೇರಿ
ತಿರೆಕೌಯಲಿ ರತಿಯಿಹುದನು ಸಾರಿ;
ಸೋದರಿಯರೆ ನೀವೆಲ್ಲರು ಬನ್ನಿ,
ಮೇದಿನಿಗೊಯ್ಯುವ ಮೋದವ ತನ್ನಿ!
ಕೊಳದೊಳಗರಳುವ ಬಿಸಜಗಳಾಗಿ,
ಕೆಲರು ಮೊರೆವ ಮರಿದುಂಬಿಗಳಾಗಿ;

ಕೆಲರೊಲೆದಾಡುವ ಮೊಳೆವುಲ್ಲಾಗಿ,
ಕೆಲರಲ್ಲೋಡುವ ಹುಲ್ಲೆಗಳಾಗಿ;
ಕೆಲರಲ್ಲಾಡುವ ನವಿಲುಗಳಾಗಿ,
ಕೆಲರಲ್ಲಿಯ ಸುರ ರಮಣಿಯರಾಗಿ;
ಸೋದರಿಯರೆ ನೀವೆಲ್ಲರು ಬನ್ನಿ,
ಮೇದಿನಿಗೊಯ್ಯುವ ಮೋದವ ತನ್ನಿ!

ಕೆಲರಲ್ಲಲೆಯುವ ರಾಧೆಯರಾಗಿ,
ಕೆಲರಲ್ಲಿಯ ಮಧುಸೂದನರಾಗಿ;
ಕೆಲರೆಳೆವದನದ ಗೋಪಿಯರಾಗಿ,
ಕೆಲರಲ್ಲಿಯ ಗೋಪಾಲಕರಾಗಿ;
ಕೆಲರಾನಂದದ ನೆಲೆವೀಡಾಗಿ,
ಕೆಲರಾನಂದದ ನಿಜರೂಪಾಗಿ;
ಸೋದರಿಯರೆ ನೀವೆಲ್ಲರು ಬನ್ನಿ,
ಮೇದಿನಿಗೊಯ್ಯುವ ಮೋದವ ತನ್ನಿ!