ವೇದಾಂತ ಕೇಸರಿಯಾಗೋ, ಮಾನವ,
ಲೋಕಾರಣ್ಯದೊಳಲೆದಾಡೆ.
ನಿರ್ಭಯನಾಗೋ, ಗರ್ಜಿಸುತಲೆಯೋ,
ಕಂಪಿಸಲಿಹಪರ ಗರ್ಜನೆಗೆ.

ವ್ಯಾಘ್ರಗಳಡಗಲಿ, ದಂತಿಗಳೋಡಲಿ,
ಮೈಮರೆಯಲಿ ಹರಿಣಾದಿಗಳು;
ಪಾಪಮೂಷಿಕವರಚುತಲಲೆಯಲಿ,
ಪುಣ್ಯಕೋಗಿಲೆ ಕೂಗಲಿ!

‘ಸೋಹಂ! ಸೋಹಂ!’ ಗರ್ಜನೆಯಿಂದ
ಜಗದಾರಣ್ಯವ ತಲ್ಲಣಿಸೊ!
‘ಬ್ರಹ್ಮಾಸ್ಮಿ’ ಎಂಬುದು ಮರುದನಿಗೈಯಲಿ
ಅಂಬರಕೇರಲಿ ‘ತತ್ತ್ವಮಸಿ!’