ಸಗ್ಗದ ಬಾಗಿಲು ಎಲ್ಲಿಹುದಣ್ಣಾ? ನುಗ್ಗಿದೆನೆಲ್ಲಿಯು ಸಿಗಲಿಲ್ಲಣ್ಣಾ! ಕಾಶಿಗೆ ಹೋದೆನು ಅಲ್ಲಿಲ್ಲಣ್ಣಾ ಮುಳುಗಿದೆ ಗಂಗೆಯೊಳಲ್ಲಿಲ್ಲಣ್ಣಾ; ಘಣಘಣ ಘಣಘಣ ಗಂಟೆಯ ಬಾರಿಸಿ, ಮಣಮಣ ಮಣಮಣ ಮಂತ್ರವ ಹೇಳಿದೆ, ಪೂಜೆಯ ಮಾಡಿದೆ, ಧೂಪವ ಹಾಕಿದೆ, ದಕ್ಷಿಣೆಯಿತ್ತೆನು ಹಾರುವರಾಳಿಗೆ; ಪಂಡಿತವರ್ಯರ ಸೇವೆಯ ಮಾಡಿದೆ, ವೇದವನೋದಿದೆ, ತರ್ಕವ ಮಾಡಿದೆ, ಸಗ್ಗದ ಬಾಗಿಲು ಎಲ್ಲಿಯು ಇಲ್ಲ; ನುಗ್ಗಿದ ಕಡೆ ತಲೆ ತಾಗದೆ ಇಲ್ಲ! ಸಗ್ಗದ ಬಾಗಿಲು ಎಲ್ಲಿಹುದಣ್ಣಾ? ನುಗ್ಗಿದೆನೆಲ್ಲಿಯು ಸಿಗಲಿಲ್ಲಣ್ಣಾ! ಸಗ್ಗದ ಬಾಗಿಲು ಅಲ್ಲಿಹುದಣ್ಣಾ! ನುಗ್ಗಿದರಲ್ಲೇ ತೆರೆಯುವುದಣ್ಣಾ! ಹಕ್ಕಿಯ ‘ಟುವ್ವಿ’ಯೊಳವಿತಿದೆಯಣ್ಣಾ, ಹೂವಿನ ಬಣ್ಣದೊಳಡಗಿದೆಯಣ್ಣಾ. ದುಡಿಯುವ ರೈತನ ನೇಗಿಲೊಳಡಗಿದೆ, ಕಡಿಯುವ ಕೂಲಿಯ ಕತ್ತಿಯೊಳಡಗಿದೆ! ನೇಗಿಲ ಗೆರೆಯೇ ಸಗ್ಗದ ಹಾದಿ, ಕರ್ಮವೆ ಬಾಗಿಲಿಗೊಯ್ಯುವ ಬೀದಿ; ಹಕ್ಕಿಗಳುಲಿಯಲು, ಹೂವುಗಳರಳಲು, ತಾಯಿಯು ಕಂದನ ಮುದ್ದಿಸಿ ನಲಿಯಲು, ಬರೆಯಲು ವೇದವ ರೈತನ ನೇಗಿಲು, ತೆರೆವುದು ದಿನದಿನ ಸಗ್ಗದ ಬಾಗಿಲು! ಸಗ್ಗದ ಬಾಗಿಲು ಅಲ್ಲಿಹುದಣ್ಣಾ! ನುಗ್ಗಿದರಲ್ಲೇ ತೆರೆಯುವುದಣ್ಣಾ! ೧೭-೮-೧೯೨೭