ಬನ್ನಿರಿ, ಬನ್ನಿರಿ, ಮಣ್ಣಿನ ಮಕ್ಕಳೆ,
ರೈತರೆ, ನೇಗಿಲ ಯೋಗಿಗಳೆ!
ಕಾಡಿನ ಬಂಟರೆ, ಮುಗಿಲಿನ ನಂಟರೆ,
ಪೈರಿನ ಗೆಳೆಯರೆ, ಭೋಗಿಗಳೆ!
ಸುಗ್ಗಿಯ ಹಬ್ಬದ ಹಾಡನು ಹಾಡಿ,
ಸುಗ್ಗಿಯ ಸೊಬಗಿನ ಕುಣಿತವ ಮಾಡಿ,
ಬನ್ನಿರಿ, ಬನ್ನಿರಿ, ಹೊಳೆಗಳ ಗೆಳೆಯರೆ,
ಭೂಮಿಯು ಹಾಡಿದ ಗೀತೆಗಳೆ!
ತೆಂಕಣ ಗಾಳಿಯು ಬೀಸುತಿದೆ,
ತೆನೆಗಳ ಕಂಪನು ಸೂಸುತಿದೆ;
ಹೊನ್ನಿನ ಹೊಲಗಳು ಮೆರೆಯುತಿವೆ,
ಚಿನ್ನದ ತೆರೆಗಳು ಕರೆಯುತಿವೆ!
ಸೊಬಗಿನ ಸುಗ್ಗಿಗೆ ಸ್ವಾಗತವೀಯಲು
ಚೋರೆಯು, ಲಾವುಗೆ, ಕೋಗಿಲೆ, ಗಿಣಿಗಳು
ಕನಸಿನ ಪದಗಳ ಹಾಡುತಿವೆ;
ಚಿಗುರಿನ ಹಸುರಿನ ವಸನವ ಹೊದೆದು
ಹೂವಿನ ಮೊಗ್ಗಿನ ಬೆಡಗನು ತಳೆದು
ಬನಗಳು ನಲಿನಲಿದಾಡುತಿವೆ!
ಸುಗ್ಗಿಯ ಹಾಡುತ ಕುಣಿಯುತ ಬನ್ನಿ,
ಮಣ್ಣಿನ ಮಕ್ಕಳಿರ;
ಹಿಗ್ಗುತ ಸುಗ್ಗಿಯ ಸಗ್ಗವ ತನ್ನಿ
ನೆಲಸಿರಿಯೊಕ್ಕಲಿರ!


ನಮ್ಮ ಕೈಗಳೆ ಭೂಮಿಗಿಳಿದಿಹ ಕಲ್ಪವೃಕ್ಷಗಳು,
ನಮ್ಮ ಕಾಲುಗಳಿಳೆಗೆ ಬಂದಿಹ ಕಾಮಧೇನುಗಳು;
ಕೆಸರು ದೂಳುಗಳಿಂದ ಕೆದರಿದ
ನಮ್ಮ ತಲೆ ವೈಕುಂಠವು!
ಬಿಸಿಲ ಬೇಗೆಗೆ ಬೆಂದು ಕಂದಿಹ
ನಮ್ಮ ಎದೆ ಕೈಲಾಸವು!
ನಮ್ಮ ಬೆವರಿಳಿದಿಳೆಗೆ ಬೀಳುವ-
ವರೆಗು ಗಂಗೆಯು ಬತ್ತಳು;
ನಮ್ಮ ಕರ್ಮದ ಮಂತ್ರದಿಂದಲೆ
ಬರದ ಮಾರಿಯು ಸತ್ತಳು;
ನಮ್ಮ ಕಂಗಳ ಕಾಂತಿಯಿಂದಲೆ
ದಿನವು ಹರಿವುದು ಕತ್ತಲು!
ನಮ್ಮ ಜೀವವೆ ಲಕ್ಷ್ಮಿದೇವಿಗೆ ಹೊಳೆವ ಮಾಂಗಲ್ಯ,
ನವಿಲವಾಹನೆ ಬಿಜ್ಜೆಯರಸಿಗೆ ನಾವೆ ಮೂಗುತಿಯು.
ಉತ್ತು ಬಿತ್ತುವುದೆಮ್ಮ ಜಪತಪ, ಗೈಮೆ ಗಾಯತ್ರಿ;
ನಮ್ಮ ಬಾಳ್ಮೆಯೆ ಕೆಡದೆ ಬೆಳಗುವ ಮಂಗಳಾರತಿಯು!
ನಮ್ಮ ತೋಟವೆ ಸಾಂಖ್ಯವು-ಮೇ
ಣೆಮ್ಮ ತಿಮ್ಮನೆ ಕಪಿಲನು!
ನಮ್ಮ ಗದ್ದೆಯೆ ಯೋಗವು-ಮೇ
ಣೆಮ್ಮ ರಂಗ ಪತಂಜಲ!
ನಮ್ಮ ಬಾಳಿದು ಬಿಡುವೆ ಇಲ್ಲದ ಕಠಿನ ಸಾಧನವು;
ನಮ್ಮ ಸೇವೆಯೆ ಮಣ್ಣು ಬೋಧಿಸಿದೆಮ್ಮ ವೇದಾಂತ!
ನಾವೆ ಹರಿಯುವ ಗಂಗೆಯು!
ನಾವೆ ಮಂಗಳ ಕಾಶಿಯು!
ನಮ್ಮ ಎದೆಗಳಲಿಹವು ಮಾಸದ
ದೇವನೊತ್ತಿರುವಡಿಗಳು;
ಲೋಕರಕ್ಷಕ ನಿಚ್ಚ ನೆಲೆಸಿಹ
ನಾವೆ ಚಲಿಸುವ ಗುಡಿಗಳು!
ಬನ್ನಿ ಬನ್ನಿರಿ ಮಣ್ಣಮಕ್ಕಳೆ, ಕರ್ಮಯೋಗಿಗಳೆ,
ಸುಗ್ಗಿ ಹಾಡನು ಹಾಡಿ ಕುಣಿಯಿರಿ, ತ್ಯಾಗಿ ಭೋಗಿಗಳೆ!


ರೈತರೆಲ್ಲರೇಳಿ ಬನ್ನಿ ಸುಗ್ಗಿ ಕುಣಿತಕೆ!
ಹಾಡಿ ಬನ್ನಿ, ಕೂಡಿ ಬನ್ನಿ, ಸುಗ್ಗಿ ಕುಣಿತಕೆ!
ನಮ್ಮ ಕುಳದ ಗೆರೆಯ ಪಯಣ ಮುಕ್ತಿಮಾರ್ಗವು,
ಅತಿ ಸಮೀಪದಲ್ಲೆ ಇರುವುದೆಮ್ಮ ಸ್ವರ್ಗವು!
ಹಾಡಿ, ಸಗ್ಗ ನಲಿಯಲಿ-ನಲಿ
ದಾಡಿ, ಮುಕ್ತಿಯೊಲಿಯಲಿ!
ಹಾಡಿ, ಚಾಗ ಕುಗ್ಗಲಿ-ನಲಿ
ದಾಡಿ ಭೋಗ ಹಿಗ್ಗಲಿ!
ಜನುಮ ಜನುಮಗಳಲಿ ಯೋಗಿವರ್ಯರೆಲ್ಲರು
ಯೋಗದಿಂದ ಸಾಧಿಸಿದ
ಪರಮಪುರುಷನಮಲಪದ
ತಮ್ಮ ಎದೆಯೊಳೆಂದು ರೈತಜನರು ಬಲ್ಲರು!
ಬರುತ ನಾವು ಮೈಮೆ ಮುಗಿಲ
ನೆಳೆದುಕೊಂಡೆ ಬರುವೆವು;
ಹೆಗಲ ಮೇಲೆ ಸಗ್ಗ ಸೊಗವ
ಹೊತ್ತು ತಿರೆಗೆ ತರುವೆವು!
ಮಣ್ಣಿನಿಂದ ಅನ್ನ ತೆಗೆವ ನಮ್ಮ ಕುಳಗಳು
ಸಗ್ಗವನ್ನೆ ದಿನವು ತೆರೆವ ಕೀಲಿ ಕೈಗಳು!
ರೈತರೆಲ್ಲರೇಳಿ ಬನ್ನಿ ಸುಗ್ಗಿಕುಣಿತಕೆ;
ಹಾಡಿ ಬನ್ನಿ, ಕೂಡಿ ಬನ್ನಿ, ಸುಗ್ಗಿಕುಣಿತಕೆ!


ಚಂಡುಹೂ, ತುಂಬೆಹೂ, ಗೊಂಡೆಹೂ, ದಂಡೆಹೂ,
ಕೆಂಪುಹೂ, ಹಳದಿಹೂ, ನೀಲಿಹೂ, ಬಿಳಿಯಹೂ,
ಬಣ್ಣ ಬಣ್ಣದ ಹೂವುಗಳನೆಲ್ಲ ಕೊಯ್ದು;
ಮಾವಿನೆಲೆ, ಹಲಸಿನೆಲೆ, ಬಿಲ್ವದೆಲೆ, ಅರಳಿ ಎಲೆ,
ತೆಂಗಿನೆಲೆ, ಅಡಿಕೆ ಎಲೆ, ಸಿಂಗರದ ಹೂವಿನೆಲೆ,
ಬಣ್ಣ ಬಣ್ಣದ ತಳಿರುಗಳನೆಲ್ಲ ಆಯ್ದು;
ಕಣ್ಣು ಕಣ್ಣಿನ ತೋರಣಂಗಳನು ನೆಯ್ದು

ಗದ್ದೆಗಳ ತೋಟಗಳ ಪೂಜಿಸುವ ಬನ್ನಿ!
ಹೂವುಗಳ ತನ್ನಿ, ಹಣ್ಣುಗಳ ತನ್ನಿ;
ಭೂಮಿದೇವಿಗೆ ಎಲ್ಲ ಅರ್ಪಿಸುವ ಬನ್ನಿ!
ಮಾಲೆಗಳ ಮಾಡಿ ಲೀಲೆಗಳನಾಡಿ,
ಭೂಮಿದೇವಿಗೆ ನಿಮ್ಮ ವಂದನೆಯ ನೀಡಿ;
ತಾಳಗಳ ಬಡಿದು, ಜಾಗಟೆಯ ಹೊಡೆದು,
ಗಿರಿವನವನೆಬ್ಬಿಸುವ ಶಂಖಗಳನೂದಿ!
ಬನದಮ್ಮ ಜಲದಮ್ಮ ನೆಲದಮ್ಮರೆಲ್ಲ
ಹಿಗ್ಗಿ ಹರಸುವ ತೆರದಿ ಸುಗ್ಗಿಯನು ಹಾಡಿ!
ಎದ್ದೇಳಿ! ಎದ್ದೇಳಿ! ರೈತರೆಲ್ಲರು ಏಳಿ!
ನೋಡಿ! ಲೋಕವೆ ಹಿಗ್ಗಿ ಹಾಡುವುದು ಕೇಳಿ,
ಸುಗ್ಗಿ ಹಬ್ಬವ ಮಾಡಿ ಚಿರವಾಗಿ ಬಾಳಿ!


ಹಾಡಿರಿ, ಹಾಡಿರಿ ಹಕ್ಕಿಗಳೇ, ನಿಮ್ಮ
ಕೂಡುತ ನಾವೆಲ್ಲ ಹಾಡುವೆವು!
ಹೊಳೆಯಿರಿ, ಹೊಳೆಯಿರಿ ಚುಕ್ಕಿಗಳೇ, ನಿಮ್ಮ
ಮೀರಿಸಿ ನಾವೆಲ್ಲ ಹೊಳೆಯುವೆವು!
ನಲಿಯಿರಿ, ನಲಿಯಿರಿ ಕಾಡುಗಳೇ, ನಮ್ಮ
ಹೂವಿನ ಪಂಜಿನ ಬೀಡುಗಳೇ, ನಿಮ್ಮ
ನಲ್ಮೆಯೊಳಾವೆಲ್ಲ ಕೂಡುವೆವು!
ಹರಿಯಿರಿ, ಹರಿಯಿರಿ ಹೊಳೆಗಳಿರ, ನಮ್ಮ
ಹೊಲಗಳ ಬಾಳಿನ ತೊರೆಗಳಿರ, ನಿಮ್ಮ
ಚಲನದೊಳಾವೆಲ್ಲ ಕೂಡುವೆವು!
ಸುಗ್ಗಿಯ ಹಬ್ಬವ ಮಾಡುವೆವು;
ಹಿಗ್ಗುತ ನಲಿ ನಲಿದಾಡುವೆವು!
ದುಃಖವ ದುಃಖದಿ ಕಾಡುವೆವು!
ಸುಖವನು ಸುಖದಿಂ ಬೇಡುವೆವು!
ಕುಣಿಯಿರಿ, ಕುಣಿಯಿರಿ ರೈತರಿರಖಿನಿಮ್ಮ
ಕುಣಿತಕೆ ಸಗ್ಗವೆ ಕುಣಿಯುವುದು!

ನಲಿಯಿರಿ, ಮಣ್ಣಿನ ಮಕ್ಕಳಿರ-ನಿಮ್ಮ
ನಲ್ಮೆಗೆ ಮುಕ್ತಿಯೆ ನಲಿಯುವುದು!


ಬನ್ನಿ ಹೋಗುವ, ಮಾಮರಂಗಳ
ನೆಳಲ ತಂಪೊಳು ತೇಲುವಾ!
ಬನ್ನಿ ತೆಂಗಿನ ಕೌಂಗು ಬಾಳೆಯ
ಬನದೊಳಾಡುತ ಸೋಲುವಾ!
ಬನ್ನಿ ಸೃಷ್ಟಿಯ ಸೊಬಗಿನಲ್ಲಿಯೆ
ಶಿವನ ರೂಪನು ನೋಡುವಾ!
ಬನ್ನಿ ಕಷ್ಟದ ಬೆವರಿನಲ್ಲಿಯೆ
ಅವನ ಪೂಜೆಯ ಮಾಡುವಾ!
ಶಿವನು ಕೊಟ್ಟೀ ಭೂಮಿಯನು ನಾ-
ವೊಲಿಯಲಾರದೆ ಹೋದರೆ
ಮುಂದೆ ಬರುವಾ ಸಗ್ಗವನು ನಾ –
ವೆಂತು ಒಲಿವೆವು, ರೈತರೇ?
ಒಂದು ಮಣ್ಣಿನ ಹೆಂಟೆಯರೆದು
ಒಂದು ನೀರಿನ ಹನಿಯನೆರೆದು
ಒಂದು ಗೇಣಿನ ನೆಲವನುತ್ತು
ಒಂದು ಬೀಜವನಲ್ಲಿ ಬಿತ್ತಿ
ಒಂದು ಹುಲ್ಲೆಸಳನ್ನು ಬೆಳೆಸುವ-
ನಾವನಾತನಿಗೆ
ಎಲ್ಲ ಜಪತಪದಿಂದಲೊದಗುವ,
ಎಲ್ಲ ಸಾಧನದಿಂದಲೊದಗುವ,
ಯೋಗ ಚಾಗಗಳೆಲ್ಲ ತೋರುವ,
ವೇದ ಮಂತ್ರಗಳೆಲ್ಲ ಸಾರುವ
ನಿತ್ಯವಾಗಿಹ ಪರಮಪದದಾ-
ನಂದವಾಗುವುದು!
ನಮ್ಮ ಕಷ್ಟಕೆ ನಷ್ಟವಿಲ್ಲವು, ನಾವೆ ಚಾಗಿಗಳು!

ಬ್ರಹ್ಮಸೃಷ್ಟಿಯ ದಿವ್ಯದೃಷ್ಟಿಗೆ ನಾವೆ ಯೋಗಿಗಳು:
ಬನ್ನಿ ಬನ್ನಿರಿ ರೈತರೆಲ್ಲರು
ಸುಗ್ಗಿ ಕುಣಿತವ ಕುಣಿಯುವಾ!
ತನ್ನಿ ಕರ್ಮದ ಪುಣ್ಯಫಲಗಳ,
ಹಿಗ್ಗಿ ತಣಿಯುವ, ದಣಿಯುವಾ!

೧೨-೧೧-೧೯೨೭