ಅಡಿಯ ಗೆಜ್ಜೆ ನಡುಗೆ, ಹೆಜ್ಜೆಯಿಡುತ ಸುಗ್ಗಿ ಬರುತಿದೆ!
ಸುಗ್ಗಿ ಬರೆ ಹಿಗ್ಗಿ ತಿರೆ ಸಗ್ಗಸೊಗವ ತರುತಿದೆ!
ಕಣಿವೆಯಿಳಿದು ತೆಮರನೇರಿ,
ತರುಗಳಲ್ಲಿ ತಳಿರ ಹೇರಿ,
ಹೊಸತು ಜೀವಕಳೆಯ ಬೀರಿ
ಸುಗ್ಗಿ ಮೂಡುತಿರುವುದು!
ಬನದ ಬಿನದದಿನಿದು ನಿನದ ಮನದೊಳಾಡುತಿರುವುದು!


ಬಂಡನುಂಡು ದುಂಬಿವಿಂಡು ಹಾಡುತಿಹವು ಹಾರುತ,
ಮತ್ತ ಮಧು ಮಾಸವಿದು ಬನ್ನಿರೆಂದು ಸಾರುತ.
ಜಾರುತಿಹುದು ಮಾಗಿ ಚಳಿ,
ಕುಸುಮಿಸಿರುವ ಲತೆಗಳಲಿ
ಮೆರೆಯುತಿಹವು ಸೊಕ್ಕಿದಳಿ
ಮುಕ್ತಜೀವರಂದದಿ!
ಉಲಿಯೆ ಪಿಕ, ಗಳಪೆ ಶುಕ, ಸುಗ್ಗಿ ಬಂದಿತಂದದಿ!


ಮಾಮರಂಗಳಲಿ ವಿಹಂಗತತಿಯ ನಿಸ್ವನಂಗಳಿಂ,
ತಳಿರ ಸೊಂಪನಲರ ಜೊಂಪನಾಂತ ಬನಬನಂಗಳಿಂ,
ನಲಿವ ಪಚ್ಚೆಯುಡೆಯನುಟ್ಟು,
ಅರಳಿದರಳುಗಳನು ತೊಟ್ಟು,
ಹಿಮದ ಮಣಿಯ ಮಾಲೆಯಿಟ್ಟು
ತಣಿದು ಸೋಲೆ ಕಣ್ಮನಂ
ಕರೆವಳೋವಿ ಬನದ ದೇವಿ ತನ್ನ ಸುಗ್ಗಿಯಾಣ್ಮನಂ!


ಹಾರಿ ಮೆರೆವ ಜಾರಿ ಹರಿವ ತೊರೆಯ ತಂಪು ದಡದೊಳು,
ಮೇಲೆ ಭಾನು ತೇಲೆ, ನಾನು ಕುಳಿತು ಮರದ ಬುಡದೊಳು
ತಿರೆಯ ಸಿರಿಯ ನೋಡುತಿರುವೆ;
ಕುರಿತು ಹಾಡ ಹಾಡುತಿರುವೆ;
ಸೊಬಗಿನೊಡನೆ ಕೂಡುತಿರುವೆ
ಕರಗಿ ಮುಳುಗಿ ತೇಲುತ!
ತೊರೆದ ಗಂಡನೆದುರುಗೊಂಡ ಕೋಮಲೆಯನು ಹೋಲುತ!


ತುರುಗಳೆಲ್ಲ ಮೇಯೆ, ಗೊಲ್ಲ ಬಸಿರಿಮರದ ನೆಳಲಲಿ
ಮಲಗಿಸಿಹನು ಮಧುವನವನು ಮುದವನುಲಿವ ಕೊಳಲಲಿ!
ನಿಂತು ಮೇವ ಮರೆತುಬಿಟ್ಟು,
ಕಿವಿಯನೆರಡ ನೆಟ್ಟಗಿಟ್ಟು,
ಗೊಲ್ಲನೆಡೆಗೆ ದಿಟ್ಟಿಯಿಟ್ಟು
ಬರೆದ ಚಿತ್ರದಂದದಿ
ಗವಿಗಳೆಲ್ಲ ಸವಿಯ ಸೊಲ್ಲನಾಲಿಸಿಹವು ಚಂದದಿ!

ಗಿರಿಗಳಿರಾ, ತೊರೆಗಳಿರಾ, ಎಲೆ ವಿಹಂಗಮಗಳಿರಾ,
ತರುಗಳಿರಾ, ಬನಗಳಿರಾ, ಮಗಮಗಿಪ ಸುಮಗಳಿರಾ,
ಸೊಬಗೆ ನನ್ನಿ ಎಂದು ಸಾರಿ;
ನನ್ನಿಯೆ ಸೊಬಗೆಂದು ತೋರಿ;
ಸೊಗದ ಸೊದೆಯ ತಿರೆಗೆ ಬೀರಿ,
ಒಲ್ಮೆ ಸೊಬಗು ಸೊಗದಲಿ
ಪರಮಪುರುಷನಮಲ ಹರುಷವಿಹುದ ಸಾರಿ ಜಗದಲಿ!


ಮಧುವೆ ಬಾರ! ಮುದವ ತಾರ! ನೀನೆ ದೇವದೂತನು!
ಪರದ ಚಿಂತೆ ಮರೆಯದಂತೆ ಕಳುಹುವನು ವಿಧಾತನು!
ಬುವಿಯ ಸಿಂಗರಿಸುತ ಬಾರ!
ಪರದ ಬೆಳಕನಿಳೆಗೆ ತಾರ!
ಸೊಬಗೆ ಶಿವನು ಎಂದು ಸಾರ!
ಬಾರ ಶಕ್ತಿದಾಯಕ!
ಹಳೆತ ಕೂಡಿ ಹೊಸತು ಮಾಡಿ ಬಾರೆಲೆ ಋತುನಾಯಕ!

೨೦-೧೦-೧೯೨೮