ಸೊಬಗನಾಸ್ವಾದಿಸಲು ಸಮಯವೆಮಗಿಲ್ಲ;
ನಭನೀಲವನು ನೋಡಿ ಬೆರಗಾಪರಲ್ಲ!

ದಿನದಿನವು ಇನನುದಯವಾಗುವಂ, ಪೋಗುವಂ;
ದಿನದಿನವು ಹಿಮಕರಂ ಮೂಡುವಂ, ಬಾಡುವಂ;
ದಿನದಿನವು ಮಾರುತಂ ಆಡುವಂ, ಓಡುವಂ;
ಮನಮಾತ್ರ ಕೊರಗುತಿದೆ ಜಡವಾಗಿ, ಬಡವಾಗಿ!

ಉದಯದಲಿ ಕುಸುಮ ತಾನರಳುವುದು, ತೆರಳುವುದು;
ಮುದದಿಂದ ಬರುವುದಾ ಮಧುಮಾಸ, ವಿಧಿಹಾಸ;
ಪದುಳದಿಂ ಪಕ್ಷಿಗಳು ಪಾಡುವುವು, ಬೇಡುವುವು;
ಎದೆಯ ಸಂತಸ ಮಾತ್ರ ಕೊರಗುತಿದೆ, ಸೊರಗುತಿದೆ!

ದಿನದಿನವು ನೋಡುವೆವು ಸೃಷ್ಟಿ ವೈಚಿತ್ರ್ಯಮಂ;
ದಿನದಿನವು ಮಾತಾಡುವೆವು ಪ್ರಕೃತಿ ಸೌಂದರ್ಯಮಂ;
ಮನಮಾತ್ರ ಕೊರಗುತಿದೆ ಜಡವಾಗಿ, ಬಡವಾಗಿ;
ಹೇ ವಿಶ್ವಜನನಿ, ಒಲಿದೆಮ್ಮ ಸಲಹಮ್ಮ!