ತಮವೇರುತಿದೆ, ಇರುಳಾಗುತಿದೆ,
ಹಿಮ ಬೀಳುತಿದೆ, ಹಾದಿಗಾರನೆ,
ಎಲ್ಲಿಗೆ ಹೋಗುವೆ, ಎಲ್ಲಿಗೆ ಹೋಗುವೆ ನೀ?

ಕಾಣದ ಹೂಗಳ ಕೊಯ್ಯಲು ಹೋಗುವೆ
ನೋಡದ ನೋಟವ ನೋಡಲು ಹೋಗುವೆ
ಮಾಡದ ಮಾಟವ ಮಾಡಲು ಹೋಗುವೆ
ದಾಂಟದ ನದಿಯನು ದಾಂಟಲು ಹೋಗುವೆ
ಹಾರದ ಕಮರಿಯ ಹಾರಲು ಹೋಗುವೆ
ಏರದ ಗಿರಿಯನು ಏರಲು ಹೋಗುವೆ
ಪರಬೊಮ್ಮನ ನೋಡಲು ಹೋಗುವೆ ನಾ!

ಹೊತ್ತು ಹೋಯಿತು, ಸುತ್ತಮುತ್ತಲು
ಕತ್ತಲಾಯಿತು, ಹಾದಿಗಾರನೆ,
ಎತ್ತ ಹೋಗುವೆ, ಎತ್ತ ಹೋಗುವೆ ನೀ?

ಹೋಗುವೆ ಕತ್ತಲೆ ಆಗದ ಊರಿಗೆ
ಹೋಗುವೆ ಹೊತ್ತೇ ಹೋಗದ ಊರಿಗೆ
ಹೋಗುವೆ ಹಗಲೇ ಇಲ್ಲದ ಊರಿಗೆ
ಹೋಗುವೆ ಇರುಳೇ ಬಾರದ ಊರಿಗೆ
ಹೋಗುವೆ ಮನಸೇ ಗ್ರಹಿಸದ ಊರಿಗೆ
ಹೋಗುವೆನಿಂದ್ರಿಯ ಕಾಣದ ಊರಿಗೆ
ಹೋಗುವೆ ಪರಬೊಮ್ಮನ ಊರಿಗೆ ನಾ!