ಹುಣ್ಣಿಮೆಯಿಂಪನು ನೀಡುತಿರೆ
ಕಣ್ಣಿಗೆ ಹಬ್ಬವ ಮಾಡುತಿರೆ
ಗಾಡಿಯ ಬಿಂಕದಿ ಮೆರೆಯೆ ತಿರೆ
ಬಾಳನು ಬೈಯುತ ಜರೆಯುವರೆ?

ಬೆಟ್ಟದ ನೆತ್ತಿಯೊಳೊಬ್ಬನೆ ನಿಂತೆನು ದಿಟ್ಟಿಸಿ ದೆಸೆಗಳ ನೋಡುತ್ತ;
ರೆಕ್ಕೆಯ ರಸಿಕರು ಹಾರಿದರಿಕ್ಕೆಗೆ ಸಂಜೆಯ ಹಾಡನು ಹಾಡುತ್ತ.
ಪಡುವಣ ದೆಸೆಯೊಳು ಕೆಂಪನು ಚೆಲ್ಲುತ ಬೈಗಿನ ನೇಸರು ತೊಳಗಿದನು;
ತೊಳಗುತ ಬೆಳಗುತಲುರುಳುತಲಿಳಿಯುತ ನಾ ನೋಡುತಲಿರೆ ಮುಳುಗಿದನು!

ತಳಿರೊಳು ಕುಳಿರೆಲರಾಡಿದುದು
ಬೈಗಿರುಳೆಲ್ಲಿಯು ತೀಡಿದುದು
ನೆಲವನು ಬಾಂದಳ ತಬ್ಬಿದುದು
ಮೌನತೆಯೆಲ್ಲಿಯು ಹಬ್ಬಿದುದು!

ನಭದೊಳು ಮೆಲ್ಲನೆ ಮಿಣುಕುತಲಿಣುಕುತ ಚುಕ್ಕಿಗಳೊಮ್ಮೆಯೆ ಮೂಡಿದುವು;
ಕನಸುಗಳಂದದಿ ಮೋಡಗಳೊಯ್ಯನೆ ತಣ್ಣೆಲರೊಳು ತೇಲಾಡಿದುವು!
ಮೂಡಣ ದೆಸೆಯೊಳು ನಸುಗೆಂಪೆಸೆಯಲು ಕತ್ತಲೆ ಹಿಮ್ಮೆಟ್ಟೋಡಿದುದು;
ಜೊನ್ನಿನ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು!

ಜನ್ನದ ಬೆಂಕಿಯ ಕೊಂಡದೊಳೇಳುವ ಶಾಂತಿಯ ದೇವತೆಯಂದದಲಿ,
ಕಬ್ಬಿಗನೆದೆಯೊಳು ಗಬ್ಬವನಾಂತಿಹ ಕಬ್ಬವು ಹೊರಗೊಗೆವಂದದಲಿ,
ನೀಲಾಂಬರದೊಳು ಮೆಲುಮೆಲನೇರುತ ತಿಂಗಳು ಮೂಡಿತು ಚಂದದಲಿ,
ಜೊನ್ನದ ಕಡಲೊಳು ಮುಳುಗುತ ಮೀಯುತ ನಲಿದುದು ತಿರೆ ಆನಂದದಲಿ!

ಗಿರಿಗಳು ಹೊಲಗಳು ಕಾಡುಗಳು
ತೊರೆಗಳು ನೀರಿನ ಬೀಡುಗಳು
ಮುದ್ದಿಡುವಿಂದುವಲಂಪಿನಲಿ
ಮೆರೆದುವು ನಲಿದುವು ಪೆಂಪಿನಲಿ!

ತಳಿರನು ಚುಂಬಿಸಿ, ಕೊಳದೊಳು ಬಿಂಬಿಸಿ, ಚೆಲುವಿನ ಚಂದ್ರಿಕೆ ಚೆನ್ನಾಯ್ತು!
ಬಾನೊಳು, ತಿರೆಯೊಳು, ಕುಣಿಯುವ ತೆರೆಯೊಳು ತಿಳಿ ಬೆಳುದಿಂಗಳು ಹೊನ್ನಾಯ್ತು!
ಮನದೊಳು ಬೆಳಗಿತು, ಎದೆಯೊಳು ತುಳುಕಿತು, ಜೊನ್ನಿನ ಬಿತ್ತರದಂಬುಧಿಯು!
ಸೊಬಗಿದು, ಸೊಗವಿದು, ಮಾಯೆಯೆ ಬೆಡಗಿದು? ಚಾಗಕೆ ಮಾಡಿದನೇಂ ಬಿದಿಯು?

ಬಾನೊಳು ತಿಂಗಳು ಬೆಳಗುತಿರೆ
ಮೀನುಗಳಿಣುಕುತ ತೊಳಗುತಿರೆ
ಶಾಂತಿಯ ಸೊಗದಲಿ ತುಂಬೆ ತಿರೆ
ಬಾಳಿದು ಹುಸಿಯೆಂದೆಂಬುವರೆ?

೯-೧೦-೧೯೨೮