ಹೊಲದೊಳಗೊಬ್ಬಳೆ ಹಳದಿಯ ಪಯಿರನು
ಕೊಯ್ಯುವ ಬಾಲೆಯ ನೋಡಲ್ಲಿ.
ತನ್ನೊಳು ತಾನೇ ಹಾಡುತ ನಲಿವಳು
ಮೆಲ್ಲಡಿಯಿಡು, ಬಾ, ನಿಲ್ಲಿಲ್ಲಿ.
ಒಬ್ಬಳೆ ಕೊಯ್ವಳು ಹೊರೆಯನು ಮಾಡಿ
ಎದೆಯನು ಸೆಳೆಯುವ ಹಾಡನು ಹಾಡಿ;
ಆಲಿಸು! ಸದ್ದಿಲಿ ಕಣಿವೆಯ ಪೆಂಪು
ಹೆಚ್ಚಲು ಹರಿವುದು ಗಾನದ ಇಂಪು.

ಅರಬರ ದೇಶದ ಮರುಭೂಮಿಯೊಳಾ
ಯಾಸದಿ ತಿರುಗುವ ದಾರಿಗರ
ಬಳಲಿಕೆಯಾರಿಪ ಹಕ್ಕಿಯ ಹಾಡೀ
ಹುಡುಗಿಯ ಕೊರಲನು ಮೀರಿಸದು;
ಹೊಸ ಹೂದಿಂಗಳ ಬೃಂದಾವನದೊಳು
ಮೋನವನೆಚ್ಚರಗೊಳಿಸುತ ಮನದೊಳು
ಹರುಷವ ಸುರಿಸುವ ಕೋಕಿಲವಾಣಿಯ
ಜರೆವುದು ಹಾಡಿದು ಹಳ್ಳಿಯ ರಾಣಿಯ.

ಹಾಡುವಳೇನೆಂದಾರೂ ಹೇಳರೆ?
ಅವಳಾ ಕಂಠವು ಹಾಡುವುದು
ಹಿಂದಿನ ಕಥೆಗಳೊ? ದೂರದ ವ್ಯಥೆಗಳೊ?
ಪೂರ್ವ ಪುರಾಣದ ಕದನಗಳೊ?
ಅಥವಾ ನಡೆಯುವ ಈಗಿನ ಕಥೆಗಳೊ?
ಪರಿಚಿತವಾಗಿಹ ದಿನದಾ ವ್ಯಥೆಗಳೊ?
ಸ್ವಾಭಾವಿಕವಹ ಗೋಳೋ? ನೋವೋ?
ಆಗುವ ಆಗಿಹ ನೆಂಟರ ಸಾವೋ?

ಬಾಲೆಯು ಹಾಡಿದುದೇನೇ ಆಗಲಿ
ತುದಿಯೇ ಇಲ್ಲದೆ ಹಾಡಿದಳು.
ತಲೆಯನು ಬಗ್ಗಿಸಿ ಪಯಿರನು ಕೊಯ್ಯುತ
ಹಾಡುತಲಿದ್ದುದ ನೋಡಿದೆನು.
ಕೇಳಿದೆ ಮೈಯಲ್ಲಾಡದೆ ನಿಂತು.
ಬೆಟ್ಟವನೇರಿದೆನಾಲಿಸುತಿಂತು:
ಆದರು ಅವಳಾ ದನಿ ಇಂಪಾಗಿ
ಎದೆಯೊಳು ಮೊರೆಯಿತು ಕಿವಿಯನು ನೀಗಿ!