ಇವನು ಮಿಂಚಿನ ದೊಂಬ ; ನೆಲ ನಿಮಿತ್ತಕ್ಕೆ ಮಾತ್ರ.
ಕೆಳಗೆ ನೆಲ ಬಿಟ್ಟು ಮೇಲೇಳಲಾರದೆಯೆ ಕುಯ್‌ಗುಡುತ್ತ
ನರಳುತಿದೆ ಪಿಟೀಲು; ಮೃದಂಗ ಇದೊ ಬಂದೆ
ಎಂದರೂ ನಡುಹಾದಿಯಲೆ ತೊದಲುತ್ತ ನಿಂತಿದೆ !
ತಂಬೂರಿದನಿ ಮಾತ್ರ ತಂಗಾಳಿಯಾಗಿದೆ ಸುತ್ತ.
ಮೇಲೆ ನೀಲಿಯ ಬಾನು, ನೂರಾರು ಕಾಮನ ಬಿಲ್ಲ ಕಮಾನು !
ಚೆಕ್ಕೆಗಳ ಚೆಂಡ ಹಿಡಿದು ಒಂದೊಂದಾಗಿ ಪುಟವೆಸೆದು
ತಂತಿಯೂ ಇಲ್ಲದೆಡೆ ಏನಿವನ ಚಳಕ ಚಮ್ಮತ್ತು !
ಜಟ್ಟಿ ಹಾಕಿದ್ದೆಲ್ಲ ಒಂದು ಪಟ್ಟು ; ಅಮೂರ್ತತೆಗು ಕೂಡ
ಇದೆ ಯಾವುದೋ ಒಂದು ಚೌಕಟ್ಟು. ಅಳೆವುದೆ ಇದನು
ಬರಿಯ ತಾಳ ತಟ್ಟುವ ಗಣಿತ ! ಕೊಳಲಿನುಲಿ ?
ಅಲ್ಲ; ಪ್ರತಿಭೆಯ ಯಮುನೆ ಮೊರೆಯುತಿದೆ ನೀಲಿಯಲಿ !

* ಶ್ರೀ ಮಹಾಲಿಂಗಂ ಅವರ ವೇಣುವಾದನವನ್ನಾಲಿಸಿ.