ಸಮಸ್ಯೆ ಇದ್ದಲ್ಲೇ ಉಪಾಯವೂ ಇರುತ್ತದೆ.  ಒಂದು ಸೋಗೆ ಹಾಳೆಸಹಿತ ಕಳಚಿ ಬಿತ್ತೆಂದರೆ ಹೊಂಬಾಳೆ ಹೊರಬಂದಿತು ಎಂದರ್ಥ.  ಹೊಂಬಾಳೆ ಬಿರಿದು ಹೂವುಗಳು ಫಲಿತು ಕಾಯಿ ಕಚ್ಚಿದಾಗ ಬಿದ್ದ ಹಾಳೆಯನ್ನೇ ತಿರುಗಿ ಗೊನೆಗೆ ಕಟ್ಟಿ ಮುಚ್ಚಿದರೆ ಮಲೆನಾಡಿನ ಬಿರುಸು ಮಳೆಗೆ ರಕ್ಷಣೆ.  ಕೊಳೆಯಿಂದ ದೂರ.  ಇದೇ ಕೊಟ್ಟೆ ಮುಚ್ಚಳ.

ಸೋಗೆಯ ಹಿಂಬದಿಯ ಹಾಳೆಯನ್ನು ಬುಡದಿಂದ ಒಂದು ಮೊಳ ಕತ್ತರಿಸಿಕೊಳ್ಳಬೇಕು.  ಹೀಗೆ ತೋಟದಲ್ಲಿ ಹಾಳೆಗಳು ಹಸಿ ಇರುವಾಗಲೇ ಕಣ್ಣು ಕತ್ತರಿಸಿಕೊಂಡು ಕಲ್ಲುಗುಂಡು ಹೇರಿ ಇಡಬೇಕು.  ಇದಕ್ಕೆ ಕಣಿ ಎನ್ನುತ್ತಾರೆ.

ಈ ಹಾಳೆಗಳನ್ನೆಲ್ಲಾ ಜೋಡಿಸಲ ಬಿದಿರಿನ ಸಪೂರ ಕಡ್ಡಿ ಬೇಕು.  ಇದನ್ನು ಮರಕ್ಕೆ ಕಟ್ಟಲು ಒಂದು ಮಾರು ಉದ್ದ ಬಾಳೆಪಟ್ಟೆ ಬೇಕು.

ಮೇ ಅಂತ್ಯದ ಹೊತ್ತಿಗೆ ಜೋಡಿಸಿಟ್ಟುಕೊಂಡ ಹಾಳೆಗಳೆಲ್ಲಾ ಒಣಗಿರುತ್ತವೆ.  ಅದನ್ನೊಮ್ಮೆ ನೀರಿನಲ್ಲಿ ನೆನೆಸಿ ಮೆದು ಮಾಡಿಕೊಳ್ಳಬೇಕು.  ದೊಡ್ಡ ಹಾಳೆಯಾದರೆ ಎರಡು, ಚಿಕ್ಕದಾದರೆ ಮೂರು ಹಾಳೆಗಳನ್ನು ಜೋಡಿಸಿ ಬಿದಿರಿನ ಕಡ್ಡಿಯಿಂದ ಪೋಣಿಸುತ್ತಾರೆ.  ಒಂದು ಜೋಡಿ ಹಾಳೆಗಳಿಗೆ ಮೂರು ಬೆಸುಗೆ.  ಇದೇ ಕೊಟ್ಟೆ.  ಇದು ಆರುವಂತೆ ಹೊಗೆ ಅಟ್ಲು ಮಾಡಿ ಹರಡಿ ಒಣಗಿಸುತ್ತಾರೆ.

ಈ ಕೊಟ್ಟೆಯನ್ನು ಗೊನೆಯ ಬುಡದವರೆಗೆ ಹೋಗಿ ಕಟ್ಟಬೇಕು.  ಅದಕ್ಕಾಗಿ ಕೂನೆಗೌಡನು ಹೂಡುಮರ

[ಗಟ್ಟಿಯಾದ ಮರ] ಆರಿಸುತ್ತಾನೆ.  ಅದನ್ನು ಹತ್ತಿದರೆ ಎಷ್ಟು ಮರಗಳಿಗೆ ಹಾರಬಹುದು ಎಂದು ಊಹಿಸುತ್ತಾನೆ.  ಆರಕ್ಕಿಂತ ಹೆಚ್ಚಿದ್ದರೆ ಒಂದು ನದರು [ಹನ್ನೊಂದು] ಕೊಟ್ಟೆ ಕೊಕ್ಕೆಗೆ ಸಿಕ್ಕಿಸಿಕೊಂಡು ಮೇಲೇರುತ್ತಾನೆ.  ಕಡಿಮೆಯಿದ್ದರೆ ಅರ್ಧನದರು [ಆರು] ಕೊಟ್ಟೆ ಕೊಕ್ಕೆಗೆ ಸಿಕ್ಕಿಸಿಕೊಳ್ಳುತ್ತಾನೆ.

ಅಡಿಕೆ ಗೊನೆಯ ಬುಡಕ್ಕೆ ಕಣ್ಣು ಕತ್ತರಿಸಿ [ಅರ್ಧಚಂದ್ರಾಕಾರವಾಗಿ ಕತ್ತರಿಸಿ] ಬುಡವನ್ನು ಸಿಕ್ಕಿಸಿ ಗೊನೆಯ ಸುತ್ತಲೂ ಹಾಳೆಯನ್ನು ಸುತ್ತುತ್ತಾರೆ.  ಮಧ್ಯದಲ್ಲಿ ಬಾಳೆಪಟ್ಟೆಯಿಂದ ಸುತ್ತಕಟ್ಟಿ ಬಿಗಿಯಾಗಿ ಕಟ್ಟುತ್ತಾರೆ.  ಕೊಟ್ಟೆಯು ಗಾಳಿಗೆ, ಮಳೆಯ ರಭಸಕ್ಕೆ ಬೀಳದಂತೆ ರಕ್ಷಣೆ.  ಈಗ ಕೊಳೆರೋಗ ಕಾಲಿಡಲೂ ಆಗದಂತೆ ಮುಚ್ಚಳ ಹಾಕಿದಂತಾಯಿತು.  ಮಳೆ ಪ್ರಾರಂಭವಾಗುವ ಮೊದಲು ಒಮ್ಮೆ ಕಟ್ಟಿದರಾಯಿತು.  ಪದೇ ಪದೇ ಕಟ್ಟುವ ಕೆಲಸವಿಲ್ಲ.  ಒಳಗಿದ್ದ ಗೊನೆ ಬೆಳೆದಂತೆ ಹಾಳೆಯು ಉಬ್ಬಿ ನಿಲ್ಲುತ್ತದೆ.

ಸುಡು ಬೇಸಿಗೆಯಲ್ಲಿಯೂ ಇದನ್ನು ಕಟ್ಟಿ ಅಡಿಕೆ ಮಣಿಗಳು ಬಿಸಿಲಿನ ಝಳಕ್ಕೆ ಉದುರುವುದನ್ನು ನಿಯಂತ್ರಿಸಬಹುದು.  ಕಾರಣ ಹಾಳೆಯ ಒಳಗೆ ಅಡಿಕೆ ತಂಪಾಗಿರುತ್ತದೆ.  ಮಳೆಗಾಲದಲ್ಲಿ ಬೆಚ್ಚಗಿರುತ್ತದೆ.

ಗೋಟಾದರೂ ಅಡಿಕೆಗಳು ನೆಲಕ್ಕುದುರದೇ ದಿನಾಲೂ ಆರಿಸುವ ಶ್ರಮ ತಪ್ಪುತ್ತದೆ.  ಮಳೆಗಾಲ ಮುಗಿದಾಗ ಕೊಟ್ಟೆಯನ್ನು ತಕ್ಷಣ ಬಿಚ್ಚಬೇಕಿಲ್ಲ.  ಗೊನೆ ಕೊಯ್ಯುವಾಗ ಬಿಚ್ಚಿದರಾಯಿತು.  ಇದು ದೋಟಿಯಲ್ಲಿ ಎಳೆದು ಹರಿಯಲು ಆಗದು.  ಕತ್ತಿ ಬಳಸಿಯೇ ಕತ್ತರಿಸಬೇಕು.

ಕೊಟ್ಟೆ ತಯಾರಿಸಿ, ಕಟ್ಟಲು ಎಕರೆಗೆ ಸುಮಾರು ಐದು ಸಾವಿರ ರೂಪಾಯಿಗಳ ಖರ್ಚು.  ಆದರೆ ಅಡಿಕೆಯ ಗುಣಮಟ್ಟ, ಅಧಿಕ ಇಳುವರಿ, ರೋಗಭಯದಿಂದ ದೂರಾಗುವ ಅನೇಕ ಕಾರಣಗಳಿಂದ ಇದು ಲಾಭವೂ ಹೌದು.

ಅಡಿಕೆ ಹಾಳೆಯೇ ಏಕೆ?

ಅಡಿಕೆ ಹಾಳೆಯ ಮೇಲೆ ನೀರು ಬಿದ್ದಾಗ ಜಾರಿಹೋಗುತ್ತದೆ.  ಒಳಭಾಗದಲ್ಲಿ ಮೆತ್ತೆಯಂತಹ ನುಣುಪಾದ ಪದರವಿದ್ದು ನೀರು ಹೀರುವಿಕೆಯನ್ನು ತಡೆಯುತ್ತದೆ.  ತೋಟದಲ್ಲಿಯೇ ಸುಲಭವಾಗಿ ಸಿಗುವ ವಸ್ತು.  ಪ್ರತಿ ಗೊನೆಗೆ ೪೫ ಡಿಗ್ರಿ ಕೋನದಲ್ಲಿ ಕಟ್ಟಿದಾಗ ಯಾವುದೇ ಬಿರುಸಿನ ಮಳೆಯೂ ಗೊನೆಗೆ ಮುಟ್ಟದೆ ಜಾರಿ ನೆಲ ಕಾಣುತ್ತದೆ.

ಕಣ್ಣು ಕತ್ತರಿಸಿ ಬಂದ ಚಂದ್ರಾಕೃತಿ ಅಥವಾ ತ್ರಿಕೋನಾಕೃತಿಯ ಹಾಳೆಗೆ ಕಣಿಗೆ ಎನ್ನುತ್ತಾರೆಇದನ್ನು ಕೊನೆಗೌಡರು ಮರ ಹತ್ತುವಾಗ ಎದೆಗೆ ಪೆಟ್ಟಾಗದಂತೆ ಕಟ್ಟಿಕೊಳ್ಳಲು ಬಳಸುತ್ತಾರೆ.