ಉತ್ತರಕನ್ನಡ ಜಿಲ್ಲೆಯ ಕಿಲಾರದ ಹಿತ್ಲಗದ್ದೆಯ ಶ್ರೀರಾಮಭಟ್ಟರ ಅಡಿಕೆ ತೋಟದಲ್ಲಿ ಕೊಳೆರೋಗ.  ತೋಟಪೂರ್ತಿ ಹಾಸಿದಂತೆ ಉದುರಿದ ಅಡಿಕೆ.  ಬೋರ್ಡೋಗೆ ಅಂಜದ ಎದೆಗಾರಿಕೆ ರೋಗಕ್ಕೆ.  ಅಪ್ಪಯ್ಯ ಲಕ್ಷ್ಮೀನಾರಾಯಣಭಟ್ಟರು ಸಾಂಪ್ರದಾಯಿಕ ಪದ್ಧತಿಯನ್ನ ನೆನಪಿಸಿದರು.  ಅದೇ ನುಣಿಕರಡದ ಗೊರಬು.

ಏನಿದು ನುಣಿಕರಡ?

ಮಲೆನಾಡಿನ ಬ್ಯಾಣಗಳಲ್ಲಿ ತಲೆಕೂದಲಿನಂತೆ ಸಪೂರದ ಬಂಗಾರದ ಬಣ್ಣದ ನುಣುಪಾದ ಹುಲ್ಲಿನ ಜಾತಿಯೊಂದು ಬೆಳೆಯುತ್ತದೆ. ಇದರ ಮೇಲೆ ನೀರು ಸುರಿದರೂ, ಇದನ್ನೇ ನೀರಿನಲ್ಲಿ ಅದ್ದಿದರೂ ಒದ್ದೆಯಾಗುವುದಿಲ್ಲ.  ಬಸಿದುಹೋಗುತ್ತದೆ.  ಒಂದು ಹನಿಯೂ ಒಳಸೇರುವುದಿಲ್ಲ.

ಎರಡು ಸಾವಿರ ಮರಗಳಿಗೆ ಕಟ್ಟು ಕಟ್ಟಲು ಕನಿಷ್ಠ ಎರಡು ಎಕರೆಯ ನುಣಿಕರಡ ಬೇಕು.  ಕಟ್ಟು ತಯಾರಿ ಸುಲಭ.  ಒಂದು ಮಾರು ಉದ್ದದ ಬಾಳೆಪಟ್ಟೆ (ಬಾಳೆಹಗ್ಗ)ಯನ್ನು ನೆಲದ ಮೇಲೆ ಹಾಸಿ.  ಅದರ ಮೇಲೆ ಮಧ್ಯಕ್ಕೆ ಸುಮಾರು ಎರಡೂವರೆ ಅಡಿ ಅಗಲಕ್ಕೆ ನುಣಿಕರಡವನ್ನು ಹರಡುತ್ತಾರೆ.  ಅದರ ಮೇಲೆ ಬೈನೆ ಎಲೆ ಹಾಕುವುದು [ಈಗ ಪ್ಲಾಸ್ಟಿಕ್ ಶೀಟ್]   ಮತ್ತೊಂದು ನುಣಿಕರಡದ ಪದರ.  ಕೆಳಗೆ ಹಾಸಿದ ಬಾಳೆ ಹಗ್ಗದ ಎರಡೂ ತುದಿಯನ್ನು ಸೇರಿಸಿ ಚಿಟಗು [ಗಂಟು] ಹಾಕುತ್ತಾರೆ.  ಮತ್ತೊಂದು ತುದಿಯಲ್ಲಿರುವ ನುಣಿಕರಡದ ತುದಿಯನ್ನೆಲ್ಲಾ ಸೇರಿಸಿ ಹೆಂಗಳೆಯರು ಮುಡಿ ಕಟ್ಟುವಂತೆ ಗಂಟು ಹಾಕುತ್ತಾರೆ.

ಮನೆಯವರೆಲ್ಲಾ ಸೇರಿ ಹಗಲು ರಾತ್ರಿ ಕುಳಿತು ಕಟ್ಟು ಕಟ್ಟಿದರು.  ಮರ ಹತ್ತುವ ತಿಮ್ಮ, ಮಂಜ, ಗಣಪತಿ ಇವರೆಲ್ಲಾ ಕೊಳೆರೋಗದ ವಿರುದ್ಧ ಸಮರ ಸಾರಲು ನಿಂತರು.  ಕಟ್ಟುಗಳನ್ನು ಹಿಂಬದಿಯ ಅಡಿಕೆ ಕೊಕ್ಕೆಗೆ ಸಿಕ್ಕಿಸಿಕೊಂಡರು.  ಮರ ಏರಿದರು.  ಒಂದೊಂದೇ ಗೊನೆಗೆ ಮೇಲ್ಭಾಗದಲ್ಲಿ ಮುಡಿಗಂಟು ಸಿಕ್ಕಿಸಿದರು.  ಹರಡಿದಂತಿರುವ ಕೆಳಭಾಗವನ್ನು ಗೊನೆಯ ಕೆಳಭಾಗದಲ್ಲಿ ಮಡಿಚಿ ಸೇರಿಸಿದರು.  ಮತ್ತೊಂದು ಬಾಳೆಪಟ್ಟಿಯಿಂದ ಮಧ್ಯಭಾಗಕ್ಕೆ ಗೊನೆ ಮರ ಸೇರಿಸಿ ಕಟ್ಟಿದರು.  ಒಂದು ಮಳೆ ಬೀಳುತ್ತಿದ್ದಂತೆ ನುಣಿಕರಡದ ಕಟ್ಟು ಗಪ್ಪಾಗಿ ಅಂಟಿ ಕೂತಿತು.

ಗೊನೆ ತೆಗೆಯುವಾಗ ಇದನ್ನೂ ಎಳೆದು ತೆಗೆಯಬೇಕು.  ಬಿರುಸಾಗಿ ಗಾಳಿ ಮಳೆ ಯಾವ ದಿಕ್ಕಿನಿಂದ ಬಂದರೂ ಇದು ಜಾರಬಾರದು.  ಹರಿದು ಬೀಳಬಾರದು.  ಅಷ್ಟುಗಟ್ಟಿಯಾಗಿರಬೇಕು-ಭಟ್ಟರ ಸಲಹೆ.

ಒಬ್ಬರು ಮುನ್ನೂರು ಗೊನೆಗಳಿಗೆ ಕಟ್ಟು ಕಟ್ಟಬಲ್ಲರು.  ಈಗ ಇಸವಿ ೨೦೦೪ರಲ್ಲಿ ಒಂದು ಎಕರೆಗೆ ಏಳು ಸಾವಿರ ಖರ್ಚು.  ಕಟ್ಟಿಗೆ ಒಂದು ರೂಪಾಯಿ ಮೂವತ್ತು ಪೈಸೆ ಕೂಲಿ. ಅಡಿಕೆ ನೆಲಕ್ಕುದುರದು.  ಕಟ್ಟಿನೊಳಗಿನ ಅಡಿಕೆ ತಣ್ಣಗಿರುತ್ತದೆ.  ಕೊಯ್ಲಿನ ಸಮಯಕ್ಕೆ ದೋಟಿಯಿಂದ ಎಳೆದರೆ ಹರಿದು ಕೆಳಗೆ ಬೀಳುತ್ತದೆ.  ಮುಂದೆ ಇದು ತೋಟಕ್ಕೆ ಮುಚ್ಚಿಗೆಯಾಗಿರುತ್ತದೆ.

ನುಣಿಕರಡದ ಗೊರಬು ಕಟ್ಟಲು ಕೌಶಲ್ಯವೂ ಬೇಕು.  ಶ್ರಮವೂ ಬೇಕು.  ಮಳೆಯ ನೀರು ಸ್ವಲ್ಪವೂ ತಾಗದ ಪರಿಣಾಮ ಅಡಿಕೆ ಗೊನೆಗಳಿಗೆ, ಅಡಿಕೆಗೆ ಕೊಳೆರೋಗ ತಗುಲಲಿಲ್ಲ.  ತಂಪಾಗಿರುವ ಕಾರಣ ಅಡಿಕೆಗಳ ಸಿಪ್ಪೆಯು ಬಹು ಮೃದುವಾಯಿತು.  ಬಿಡಿಸಲೂ ಸುಲಭವಾಯಿತು.

ಕೆಂಪು ಅಡಿಕೆ (ಗೋಟು) ಕಡಿಮೆ ಬಿಸಿಲಿಗೆ ಒಣಗಿತು.  ಅದನ್ನು ಬಿಡಿಸಿದಾಗ ಬಿಳಿಯ ಒಳ್ಳೆಯ ಚಾಲಿಯೂ ಸಿಕ್ಕಿತು.

ಈಗ ಸಾಗರ, ಸಿದ್ದಾಪುರ, ಶಿರಸಿಗಳಲ್ಲಿ ಕೊಳೆರೋಗಕ್ಕೆ ನುಣಿಕರಡದ ಗೊರಬು ಕಟ್ಟಿಸುವವರು ಹೆಚ್ಚಾಗುತ್ತಿದ್ದಾರೆ.