ನನಗೆ ಕೊಳೆರೋಗದ ತಲೆಬಿಸಿಯೇ ಇಲ್ಲ-ಕುಳಿಬೀಡಿನ ಸುಬ್ರಾಯಭಟ್ಟರ ಖಡಕ್ ಮಾತನ್ನು ಕೇಳಿದರೆ ಯಾರಿಗಾದರೂ ಹುಬ್ಬೇರುವುದು ಸಹಜ.  ಕಳೆದ ೧೫ ವರ್ಷಗಳಿಂದ ನಮ್ಮ ತೋಟಕ್ಕೆ ಕೊಳೆರೋಗ ಕಾಲಿಟ್ಟಿಲ್ಲ ಎಂದು ಭಟ್ಟರು ಹೇಳುತ್ತಿದ್ದರೆ ನಮ್ಮ ಇಡೀ ದೇಹವೇ ಆಶ್ಚರ್ಯಸೂಚಕ ಚಿಹ್ನೆಯೋ, ಪ್ರಶ್ನಾರ್ಥಕ ಚಿಹ್ನೆಯೋ ಆಗಿ ಪರಿವರ್ತನೆಯಾಗುವುದರಲ್ಲಿ ಸಂದೇಹವೇ ಇಲ್ಲ.  ಕಾಪರ್ ಸಲ್ಫೇಟ್, ಸುಣ್ಣ, ನೀರು.  ಅದು ಹೆಚ್ಚು, ಇದು ಹೆಚ್ಚು ಎನ್ನುವ ಯಾವ ಜಂಜಾಟವೂ ಇಲ್ಲ ಎನ್ನುವ ಮೂರನೇ ಮಾತು ಮುಗಿಯುವ ಮೊದಲೇ ಅವರ ತೋಟಕ್ಕೆ ಓಡುವ ಆತುರ ಹೆಚ್ಚಾಗಿತ್ತು.

ತೋಟದ ತುಂಬಾ ಪ್ಲಾಸ್ಟಿಕ್ ರೇನ್‌ಕೋಟ್ ತೊಡಿಸಿದ ಅಡಿಕೆಗೊನೆಗಳು.  ಇದು ಒಮ್ಮೆಯೂ ಕೊಳೆರೋಗವನ್ನು ಅಡಿಕೆಗೆ ಸೇರಲು ಬಿಟ್ಟಿಲ್ಲ ಎನ್ನುವ ದನಿ ಹಿಂದಿನಿಂದ ಬಂತು.  ಎಷ್ಟೇ ಮಳೆ ಬಂದರೂ ಅಡಿಕೆಗೆ ತೊಟ್ಟು ನೀರೂ ಸೇರದಂತೆ ಅಡಿಕೆ ಗೊನೆಯನ್ನು ಸುತ್ತಿ ಗಟ್ಟಿಯಾಗಿ ಮರಕ್ಕೆ ಕಟ್ಟಿದ ಪ್ಲಾಸ್ಟಿಕ್ ಹೊದಿಕೆ.  ಡಿಸೆಂಬರ್‌ನಲ್ಲೂ ಹರಿಯದೇ ಗಟ್ಟಿಯಾಗಿತ್ತು.  ಭಟ್ಟರ ತೋಟದಲ್ಲಿ ಒಂದು ಅಡಿಕೆಯೂ ನೆಲಕ್ಕೆ ಬಿದ್ದಿರಲಿಲ್ಲ.  ಬೆಚ್ಚಗಿನ ಹೊದಿಕೆಯೊಳಗೆ ಅಡಿಕೆಗಳು ಆರೋಗ್ಯಯುತ ನಗು ಬೀರುತ್ತಿದ್ದವು.  ಭಟ್ಟರ ಮುಖದಲ್ಲಿ ಅದರ ಪ್ರತಿಫಲನ ಕಾಣಿಸುತ್ತಿತ್ತು.

ಸಿದ್ದಾಪುರ ತಾಲ್ಲೂಕಿನ ಕಿಲಾರ-ಕುಳಿಬೀಡು ಗ್ರಾಮಗಳಲ್ಲಿ ವಾರ್ಷಿಕ ೩೦೦೦ ಮಿಲಿಮೀಟರ್ ಮಳೆಯಾಗುತ್ತದೆ.  ಇಲ್ಲಿ ಕೊಳೆರೋಗ ತೀರಾ ಸಾಮಾನ್ಯ.  ಪ್ರತಿವರ್ಷ ಮಳೆಗಾಲದಲ್ಲಿ ಎಷ್ಟು ಸಾರಿ ಕೊಳೆ ಔಷಧಿ ಹೊಡೆಸಿದರೂ ಕೊಳೆರೋಗ ಬರುವುದು ತಪ್ಪುವುದಿಲ್ಲ ಎನ್ನುವುದು ಕೃಷಿಕರ ಅಳಲು.  ಸುಬ್ರಾಯಭಟ್ಟರು ಇದಕ್ಕೊಂದು ಪರ್ಯಾಯ ಯೋಚನೆ ಮಾಡಿದರು.

ಹಿಂದೆ ನುಣಿಕರಡವನ್ನು ಆರಿಸಿ ಅಡಿಕೆಗೊನೆಗೆ ಕಟ್ಟುವ ಪದ್ಧತಿಯಿತ್ತು.  ಅಂದರೆ ಮಳೆಯ ನೀರು ಅಡಿಕೆಯ ಮೇಲೆ ಬೀಳದಂತೆ ನುಣಿಕರಡದ ಮೇಲಿಂದ ಜಾರಿಹೋಗುತ್ತಿತ್ತು.  ನುಣಿಕರಡದ ಬದಲು ಪ್ಲಾಸ್ಟಿಕ್ ಹೊದಿಕೆ ಕಟ್ಟಿದರೂ ಆಗಬಹುದಲ್ಲಾ ಎನ್ನುವ ಯೋಚನೆ ಬಂದಿದ್ದೇ ತಡ ಸುಬ್ರಾಯಭಟ್ಟರು ಬೆಂಗಳೂರಿನಿಂದ ಗೊನೆಯ ಗಾತ್ರಕ್ಕೆ ಸರಿದೂಗಬಲ್ಲ ಪ್ಲಾಸ್ಟಿಕ್ ಹೊದಿಕೆ ತಂದೇಬಿಟ್ಟರು.  ಪ್ರಾರಂಭದಲ್ಲಿ ಗೊನೆಗೆ ಸುಮ್ಮನೆ ಸುತ್ತಿದ್ದಾಯಿತು.  ಒಂದೆರಡು ಗಾಳಿ ಮಳೆಗೆ ಪ್ಲಾಸ್ಟಿಕ್ ಹೊದಿಕೆಯೆಲ್ಲಾ ನೆಲಕ್ಕೆ ಬಿದ್ದವು.  ಅದಾಗಿ ಸ್ವಲ್ಪ ದಿನಗಳಲ್ಲಿ ಅಡಿಕೆಯೂ ನೆಲಕ್ಕೆ ಬಂತು.

ಎರಡನೇ ವರ್ಷ ಮಾತ್ರ ಪ್ಲಾಸ್ಟಿಕ್ ಹೊದಿಕೆಯನ್ನು ಅಡಿಕೆ ಗೊನೆಯ ಸುತ್ತಲೂ ಕೊಪ್ಪೆಯಂತೆ ಮುಚ್ಚಿ, ಸುತ್ತುವರೆದು ಅಡಿಕೆಮರಕ್ಕೆ ಬಿಗಿದು ಕಟ್ಟಿದರು.  ಒಂದು ಅಡಿಕೆಗೂ ಕೊಳೆರೋಗ ಬರಲಿಲ್ಲ.  ಎರಡು ಎಕರೆ ತೋಟಕ್ಕೆ ಹತ್ತು ಸಾವಿರ ಖರ್ಚು ಮಾಡಿದ್ದು ಸಾರ್ಥಕವಾಗಿತ್ತು ಎನ್ನುವದನ್ನು ಭಟ್ಟರು ನೆನಪಿಸಿಕೊಳ್ಳುತ್ತಾರೆ.  ಈ ಪದ್ಧತಿ ಮುಂದೆ ಖಾಯಂ ಆಯಿತು.  ಪ್ಲಾಸ್ಟಿಕ್‌ಹೊದಿಕೆಯಲ್ಲಿ ಸುಧಾರಣೆಗಳು, ಕಟ್ಟುವ ಕಾಲದ ಬದಲಾವಣೆಗಳು, ಕಟ್ಟುವಾಗ ಮಾಡಿಕೊಳ್ಳುವ ಸಿದ್ಧತೆಗಳಲ್ಲಿ ಸುಲಭದ ಮಾರ್ಗಗಳೆಲ್ಲಾ ಅನ್ವೇಷಣೆಯಾದವು.

ಪ್ಲಾಸ್ಟಿಕ್ ಹೊದಿಕೆ ಮೂರು ಗಾತ್ರಗಳಲ್ಲಿ ಸಿಗುತ್ತದೆ.  ೨೨-೨೪, ೨೪-೨೬ ಹಾಗೂ ೨೬-೨೮.  ಇದರಲ್ಲಿ ಭಟ್ಟರು ಆಯ್ಕೆ ಮಾಡುವುದು ೨೪-೨೬ರ ಗಾತ್ರ.  ಒಂದು ಕಿಲೋಗ್ರಾಂಗೆ ೮೦ ರೂಪಾಯಿಗಳಿಂದ ೧೨೫ ರೂಪಾಯಿಗಳ ಬೆಲೆ.  ಅದರಲ್ಲಿ ಮೂರು ಮೈಯಿರುವ ೪೦ರಿಂದ ೫೦ ಹೊದಿಕೆಗಳಿರುತ್ತವೆ.  ಭಟ್ಟರಿಗೆ ವರ್ಷಕ್ಕೆ ೩,೫೦೦ ಹೊದಿಕೆಗಳು ಬೇಕು.  ಒಮ್ಮೆ ಬಳಸಿದ್ದು ಮರುಬಳಕೆಗೆ ಸಿಗುವುದಿಲ್ಲ.  ಮಳೆ ಬೀಳುವುದರೊಳಗೆ ಗೊನೆಗಳಿಗೆ ಹೊದಿಕೆ ಕಟ್ಟಿ ಪೂರೈಸಬೇಕು. ಪ್ರತಿವರ್ಷ ಮೇ ಮೂರನೇ ವಾರದ ನಂತರ ಹೊದಿಕೆ ಕಟ್ಟಿಸುವ ದಿನದ ಆಯ್ಕೆ.  ಮರ ಏರುವ ಹೊದಿಕೆ ಕಟ್ಟುವ ತಜ್ಞರಾದ ತಿಮ್ಮ, ಮಂಜ ಮತ್ತು ಗಣಪತಿಯವರ ಸಮಯ ಹೊಂದಿಸಿಕೊಂಡು ಮಾಡಲಾಗುತ್ತದೆ.  ದಿನಕ್ಕೆ ೨೦೦ರಿಂದ ೩೫೦ ಗೊನೆಗಳಿಗೆ ಹೊದಿಕೆ ಕಟ್ಟುತ್ತಾರೆ. 

[ಇದನ್ನು ಕೊಟ್ಟೆ ಕಟ್ಟುವುದು ಎಂದು ಕರೆಯುತ್ತಾರೆ]  ಒಂದು ಹೊದಿಕೆ ಕಟ್ಟಲು ಒಂದು ರೂಪಾಯಿ ಎಪ್ಪತ್ತೈದು ಪೈಸೆ ಕೂಲಿ.

ಹೊದಿಕೆಯಲ್ಲಿ ತೆರೆದಿರುವ ಭಾಗ ಕೆಳಕ್ಕೆ ಬರುವಂತೆ ಕಟ್ಟಬೇಕು.  ಬರೀ ಗೊನೆಗೆ ಸುತ್ತಿ ಕಟ್ಟಿದರೆ ಗಟ್ಟಿಯಾಗಿ ನಿಲ್ಲುವುದಿಲ್ಲ.  ಪ್ರತಿ ಗೊನೆಗೂ ಬೇರೆ ಬೇರೆ ಹೊದಿಕೆ ಕಟ್ಟಬೇಕು.  ಹೀಗೆ ಅನೇಕ ಟಿಪ್ಸ್‌ಗಳನ್ನು ಭಟ್ಟರು ನೀಡುತ್ತಾರೆ.

ಒಮ್ಮೆಲೆ ೫೦ ಹೊದಿಕೆಗಳನ್ನು ಸೊಂಟದ ಚೀಲದಲ್ಲಿ ಇಟ್ಟುಕೊಂಡು ಮೇಲೇರಲು ಅನುವಾಗುವಂತೆ ಭಟ್ಟರ ಮನೆಯವರೆಲ್ಲಾ ಸೇರಿ ಪ್ಲಾಸ್ಟಿಕ್ ಹೊದಿಕೆಗಳನ್ನು ಬಿಡಿಸಿ ಗಂಟುಹಾಕಿ ಸಿದ್ಧ ಮಾಡಿ ಇಡುತ್ತಾರೆ.  ಮೂರೂ ಜನರೂ ಮೂರ್‍ನಾಲ್ಕು ದಿನಗಳಲ್ಲಿ ಇಡೀ ತೋಟಕ್ಕೆ ಹೊದಿಕೆ ಕಟ್ಟಿ ಪೂರೈಸುತ್ತಾರೆ.  ಹೊದಿಕೆ ಕಟ್ಟಿದ ಮೇಲೆ ಹದಿನೈದು ದಿನ ಮಳೆಯಾಗದಿದ್ದರೂ ಅಡಿಕೆ ಗೊನೆಗೆ ಯಾವ ಅಪಾಯವೂ ಇಲ್ಲ.

ಪ್ರಾರಂಭದಲ್ಲಿ ಕೊಳೆ ನಿವಾರಕ ಔಷಧಿ ಸಿಂಪಡಿಸಿ ಹೊದಿಕೆ ಕಟ್ಟುವ ಪದ್ಧತಿ ಇತ್ತು.  ಈಗ ನಾಲ್ಕು ವರ್ಷಗಳಿಗೊಮ್ಮೆ ಕೊಳೆ ನಿವಾರಕ ಔಷಧಿ ಸಿಂಪಡಣೆ ಮಾಡಿ ಹೊದಿಕೆ ಕಟ್ಟುತ್ತಾರೆ.  ಕಾರಣ ಒಂದೊಮ್ಮೆ ಹೊದಿಕೆ ಹರಿದು ಕೊಳೆರೋಗ ಬಂದರೆ ಬೇರೆ ಗೊನೆಗಳಿಗೆ ತೊಂದರೆಯಾಗಬಾರದೆನ್ನುವ ಮುಂದಾಲೋಚನೆ.

ಸಾಮಾನ್ಯವಾಗಿ ಮಂಜ, ತಿಮ್ಮ ಮತ್ತು ಗಣಪತಿಯವರು ಕಟ್ಟಿದ ಹೊದಿಕೆ ಹರಿದಿದ್ದಾಗಲೀ, ಜಾರಿದ್ದಾಗಲೀ ಇಲ್ಲವೇ ಇಲ್ಲವೆನ್ನಬಹುದು.  ಹಾಗೊಮ್ಮೆ ಹರಿದರೆ ಎಂತಹ ಮಳೆಯಿದ್ದರೂ ಅಂಜದೆ ಮತ್ತೊಮ್ಮೆ ಕಟ್ಟುವ ಛಾತಿಯೂ ಇವರಿಗಿದೆ.

[ಒಂದು ಎಕರೆಗೆ ಪ್ಲಾಸ್ಟಿಕ್ ಹೊದಿಕೆ, ಕಟ್ಟುವಿಕೆ ಎಲ್ಲಾ ಸೇರಿ ಹತ್ತು ಸಾವಿರ ರೂಪಾಯಿಗಳ ಖರ್ಚಾಗುತ್ತದೆ.  ಕ್ವಿಂಟಾಲ್‌ಗಟ್ಟಳೆ ಉದುರಿಹೋಗುವ ಅಡಿಕೆ ಎದುರು ದುಬಾರಿ ಏನಲ್ಲ.]

ನವರಾತ್ರಿಯ ಸಮಯದಲ್ಲಿ ಕೊಟ್ಟೆಯನ್ನು ಬಿಚ್ಚಬಹುದು.  ಆದರೆ ಮಳೆಯ ಸೂಚನೆ ಇದ್ದರೆ ತಡಮಾಡಿ ಬಿಚ್ಚುವುದೇ ಒಳ್ಳೆಯದು.  ಕಳೆದವರ್ಷ ನವರಾತ್ರಿಯಲ್ಲಿ ಹೊದಿಕೆ ಬಿಚ್ಚಿದ ಮೇಲೆ ತೋಟದಲ್ಲಿ ಒಂದೆರಡು ಗೊನೆಗಳಿಗೆ ಕೊಳೆರೋಗ ಬಂದಿದ್ದೂ ಭಟ್ಟರದ ದಾಖಲೆಯಲ್ಲಿದೆ.  ಅದಕ್ಕಾಗಿ ದೀಪಾವಳಿಯ ಸಮಯ ಬಿಚ್ಚಿಸಲು ಯೋಗ್ಯ.  ಹೊದಿಕೆ ಬಿಚ್ಚಿದ ಮೇಲೆ ಒಂದು ಮಳೆ ಬಂದರೆ ಅಡಿಕೆ ಸುಲಿಯಲು ಸಪೂರವಾಗಿರುತ್ತದೆ.  ದೋಟಿಯಲ್ಲಿ ಎಳೆದರೆ ಅಡಿಕೆ ಉದುರಬಹುದು.  ಮರ ಬಗ್ಗಿಸಿಯೇ ಬಿಚ್ಚುವುದು ಒಳ್ಳೆಯದು.

ಪಕ್ಕದೂರು ಹಿತ್ಲಗದ್ದೆಯ ಶ್ರೀರಾಮಭಟ್ಟರ ತೋಟಕ್ಕೆ ೨೦೦೫ರಲ್ಲಿ ವಿಪರೀತ ಕೊಳೆರೋಗ ಬಂತು.  ಇಡೀ ತೋಟಕ್ಕೂ ವ್ಯಾಪಿಸಿತ್ತು.  ನಾಲ್ಕು ದಿನ ಕೊಳೆ ಅಡಿಕೆ ಆರಿಸಿದರೂ ಮುಗಿಯದಷ್ಟು ಅಡಿಕೆಗಳು ಉದುರಿದ್ದವು.  ಫಸಲು ಸುಮಾರು ೧೬ ಕ್ವಿಂಟಲ್‌ನಷ್ಟು ಕಡಿಮೆ ಬಂತು.  ಕೊಳೆರೋಗ ಬೋರ್ಡೋ ದ್ರಾವಣಕ್ಕೆ ಅಂಜುವುದಿಲ್ಲ ಎಂದು ತಿಳಿದ ಶ್ರೀರಾಮಭಟ್ಟರು ಸಾಂಪ್ರದಾಯಿಕ ವಿಧಾನಕ್ಕೆ ಶರಣಾಗಲು ನಿರ್ಧರಿಸಿದರು.  ಹಿಂದೆ ನುಣಿಕರಡದ ಕಟ್ಟು ಮಾಡಿ ಗೊನೆಗಳಿಗೆ ನೀರು ತಾಗದಂತೆ ಕಟ್ಟುವುದು ಪದ್ಧತಿ.  ಅತಿಯಾಗಿ ಮಳೆಯಾಗುವ ಪ್ರದೇಶದಲ್ಲಿ ನುಣಿಕರಡದ ಮಧ್ಯೆ ಬೈನೆ ಎಲೆಗಳನ್ನು ಹಾಕಿ ಕಟ್ಟುವ ಪದ್ಧತಿಯೂ ಇತ್ತು.  ಎಷ್ಟು ಕಾಲ ವಿಫುಲ ಮಳೆಯಾದರೂ ನುಣಿಕರಡದ ಮೇಲೆ ಬಿದ್ದ ನೀರು ಸ್ವಲ್ಪವೂ ಒಳಗಿಳಿಯದೆ ಜಾರಿಹೋಗುತ್ತದೆ.  ಗೊನೆಗಳಿಗೆ ನೀರು ತಾಗದು.  ಗೊನೆಗಳನ್ನು ತಂಪಾಗಿರುತ್ತಿದ್ದವು.  ಮಳೆಗಾಲ ಕಳೆದು ಗೊನೆಗಳಲ್ಲಿ ಅಡಿಕೆಗಳು ದೊಡ್ಡದಾಗುತ್ತಾ ಬೆಳೆಯುತ್ತಿದ್ದಂತೆ ಕರಡದ ಕಟ್ಟು ಉದುರಿ ನೆಲ ಸೇರಿ ಮಣ್ಣಾಗುತ್ತಿತ್ತು.

ಒಂದೊಮ್ಮೆ ಕಟ್ಟು ಸರಿಯಾಗದಿದ್ದರೆ ಇರಲಿ ಎಂದು ಒಮ್ಮೆ ಬೋರ್ಡೋ ಸಿಂಪಡಿಸಿದರು.

ಇಸವಿ ೨೦೦೬ರಲ್ಲಿ ಶ್ರೀರಾಮಭಟ್ಟರು ತಮ್ಮ ಬ್ಯಾಣದಲ್ಲಿರುವ ನುಣಿಕರಡ ಸ್ವಲ್ಪವೂ ಬಿಡದಂತೆ ಕಡಿಸಿದರು.  ಕರಡವನ್ನು ಅಡಿಕೆ ಗೊನೆಗೆ ಸುತ್ತಲು ಅನುವಾಗುವಂತೆ ಕಟ್ಟು ತಯಾರಿಸುವ ಕೆಲಸ ನಾಜೂಕಿನದ್ದು.  ಶ್ರೀರಾಮಭಟ್ಟರ ತಂದೆ ಲಕ್ಷ್ಮೀನಾರಾಯಣಭಟ್ಟರು ೧೯೭೦ರಲ್ಲಿ ಕಟ್ಟು ಕಟ್ಟುತ್ತಿದ್ದುದನ್ನು ಮತ್ತೆ ಮನೆಯವರೆಲ್ಲಾ ಸೇರಿ ಕಲಿತು ಎರಡು ಸಾವಿರ ಕಟ್ಟು ತಯಾರಿಸಿದರು.  ಅತಿಯಾದ ಮಳೆಯ ಕಾರಣ ಕಟ್ಟಿನ ಮಧ್ಯೆ ಬೈನೆ ಎಲೆಯ ಬದಲು ಪ್ಲಾಸ್ಟಿಕ್ ಶೀಟನ್ನು ಇಟ್ಟರು.  ಎರಡು ಸಾವಿರ ಮರಗಳಿಗೆ ನುಣಿಕರಡದ ಕಟ್ಟು ತಯಾರಿಸಲು ಕನಿಷ್ಠ ಎರಡು ಎಕರೆ ಬ್ಯಾಣ ಇರಬೇಕು.  ವ್ಯಾಣದಲ್ಲಿ ದಪ್ಪ ಕರಡವೂ ಇರುತ್ತದೆ.  ಅದು ಕಟ್ಟು ತಯಾರಿಸಲು ಬರುವುದಿಲ್ಲ.  ಕರಡದ ಕೊಯ್ಲಾದ ಮೇಲೆ ನುಣಿಕರಡವನ್ನೇ ಬೇರೆ ತೆಗೆದಿಟ್ಟುಕೊಳ್ಳಬೇಕು.

ಅಡಿಕೆ ಕೊನೆಗೆ ಕಟ್ಟನ್ನು ಭದ್ರವಾಗಿ ಕಟ್ಟಲು ತಿಮ್ಮ, ಮಂಜ ಹಾಗೂ ಗಣಪತಿ ಸಿದ್ಧರಾದರು.  ಇದರ ಕೆಲಸ ಸ್ವಲ್ಪ ಭಿನ್ನ.  ಕಟ್ಟಿನ ಮುಡಿಗಂಟನ್ನು ಗೊನೆಯ ಮೇಲ್ಭಾಗಕ್ಕೆ ಸಿಕ್ಕಿಸುತ್ತಾರೆ.  ಹರಡಿಕೊಂಡು ಬಾಳೆಪಟ್ಟಿಯಿರುವ ಕೆಳಭಾಗವನ್ನು ಗೊನೆಯ ಕೆಳಭಾಗಕ್ಕೆ ಸೇರಿಸುತ್ತಾರೆ.  ಮಧ್ಯೆ ಗೊನೆ ಹಾಗೂ ಅಡಿಕೆ ಮರ ಸೇರಿಸಿ ಬಾಳೆಪಟ್ಟಿಯಿಂದಲೇ ಗಂಟು ಹಾಕುತ್ತಾರೆ.  ಕೂಲಿ, ಒಂದು ಕಟ್ಟಿಗೆ ಒಂದು ರೂಪಾಯಿ ಮೂವತ್ತು ಪೈಸೆ.

ಕೊಳೆರೋಗದ ಕುರುಹೂ ಸಹ ಕಾಣಿಸಲಿಲ್ಲ.  ಮಳೆಗಾಲ ಕಳೆದ ಮೇಲೆ ಕಟ್ಟನ್ನು ಸರಿಸುತ್ತಾ ಅಡಿಕೆ ದೊಡ್ಡದಾಗತೊಡಗಿತು.  ಒಂದು ಎಕರೆಗೆ ಆದ ಒಟ್ಟು ಖರ್ಚು ೭,೦೦೦ ರೂಪಾಯಿಗಳು ಮಾತ್ರ.  ಕೈಗೆ ಸಿಕ್ಕ ಫಸಲು ಖರ್ಚಿನ ನಾಲ್ಕು ಪಟ್ಟು ಆದಾಯ ತಂದಿತ್ತು.

ಪ್ಲಾಸ್ಟಿಕ್ಹೊದಿಕೆಹಾಗೂನುಣಿಕರಡದಕಟ್ಟಿನವ್ಯತ್ಯಾಸಗಳು

ಪ್ಲಾಸ್ಟಿಕ್ ಹೊದಿಕೆ ಮಳೆಗಾಲದಲ್ಲಿ ತಣ್ಣಗೆ ಇರುತ್ತದೆ.  ಗಾಳಿಯಾಡದಂತೆ ಕಟ್ಟಿದರೆ ಬಿಸಿಲು ಬಿದ್ದಂತೆ ಬಿಸಿಯಾಗಿ ಒಳಗಿರುವ ಅಡಿಕೆಯೂ ಬಿಸಿಯಾಗುವ ಸಾಧ್ಯತೆಯಿದೆ.  ನುಣಿಕರಡದ ಕಟ್ಟಿನ ಒಳಗೆ ಅಡಿಕೆ ಸದಾ ತಂಪಾಗಿರುತ್ತದೆ.

ಪ್ಲಾಸ್ಟಿಕ್ ಹೊದಿಕೆ ಗಾಳಿಯ ರಭಸಕ್ಕೆ ಹರಿದುಹೋಗುವ ಸಾಧ್ಯತೆಯಿದೆ.  ಕಟ್ಟು ತಯಾರಿಸುವಿಕೆ ಸರಿಯಾಗಿದ್ದರೆ ಎಂತಹ ಗಾಳಿಗೂ ನುಣಿಕರಡದ ಕಟ್ಟು ಅತ್ತಿತ್ತ ಸರಿಯಲಾರದು.

ಪ್ಲಾಸ್ಟಿಕ್ ಹೊದಿಕೆ ಮರುಬಳಕೆಗೆ ಬರುವುದಿಲ್ಲ.  ಕಟ್ಟಿದ ಹೊದಿಕೆಯನ್ನು ಮೇಲೆ ಹತ್ತಿಯೇ ಬಿಚ್ಚಬೇಕು.  ಆದರೆ ನುಣಿಕರಡದ ಕಟ್ಟಿಗೆ ಬಳಸಿದ ಬಾಳೆಪಟ್ಟಿ, ಮಳೆಗಾಲ ಕಳೆಯುತ್ತಿದ್ದಂತೆಯೇ ಲಡ್ಡಾಗಿ ಹರಿದು ನೆಲಕ್ಕೆ ಬೀಳುತ್ತದೆ.  ಇದ್ದ ಕಟ್ಟು ಅಲ್ಲಿಯೇ ಗೊಬ್ಬರವಾಗುತ್ತದೆ [ಮುಚ್ಚಿಗೆಯಾಗುತ್ತದೆ]

ನುಣಿಕರಡದ ಕಟ್ಟು ತಯಾರಿಸಲು ತಜ್ಞತೆ ಬೇಕು.  ಕೆಲಸವೂ ಹೆಚ್ಚು.  ನುಣಿಕರಡ ಬೆಳೆದಿರಬೇಕು.

ಪ್ಲಾಸ್ಟಿಕ್ ಹೊದಿಕೆ ಸಿದ್ಧರೂಪದಲ್ಲೇ ದೊರೆಯತ್ತದೆ.

ನುಣಿಕರಡ

ಮಲೆನಾಡಿನ ಹುಲ್ಲುಗಾವಲೇ ಬ್ಯಾಣ.  ಈ ಬ್ಯಾಣಗಳಲ್ಲಿ ಮಂಡೆಕೂದಲಿನಂತಹ ತೆಳುವಾದ ನುಣುಪಾದ ಹುಲ್ಲುಜಾತಿಯೊಂದು ಬೆಳೆಯುತ್ತದೆ.  ಒಣಗಿದಾಗ ಬಂಗಾರದ ಬಣ್ಣದ ಕಡ್ಡಿಯಂತೆ ಫಳಫಳ ಹೊಳೆಯುತ್ತದೆ.  ಈ ಹುಲ್ಲನ್ನೇ ನುಣಿಕರಡವೆಂದು  ಹೇಳುತ್ತಾರೆ.  ಇದನ್ನು ದನ, ಎಮ್ಮೆಗಳು ಆಸೆಪಟ್ಟು ಗಬಗಬ ಎಂದು ತಿನ್ನುತ್ತವೆ.  ಇದರ ಮೇಲೆ ನೀರು ಸುರಿದರೂ ನೀರಿನಲ್ಲಿ ಅದ್ದಿ ಮೇಲೆತ್ತಿದ್ದರೂ ನೀರೆಲ್ಲಾ ಬಸಿದುಹೋಗುತ್ತದೆ.  ಒಂದು ತೊಟ್ಟು ನೀರೂ ನಿಲ್ಲುವುದಿಲ್ಲ, ಒಳಸೇರುವುದೂ ಇಲ್ಲ.

ಕಟ್ಟು ತಯಾರಿಸುವ ಕ್ರಮ

ಒಂದು ಮಾರು ಉದ್ದದ ಬಾಳೆಪಟ್ಟಿಯನ್ನು ಮೊದಲು ನೆಲಕ್ಕೆ ಹಾಕಿಕೊಳ್ಳುತ್ತಾರೆ.  ಅದರ ಮೇಲೆ ಮಧ್ಯಕ್ಕೆ ಸುಮಾರು ಎರಡೂವರೆ ಅಡಿ ಅಗಲ ನುಣಿಕರಡವನ್ನು ಹರಡುತ್ತಾರೆ.  ಆಮೇಲೆ ಪ್ಲಾಸ್ಟಿಕ್ ಶೀಟ್ ಹಾಕುತ್ತಾರೆ.  ಮತ್ತೊಂದು ಹಾಸು ನುಣಿಕರಡ ಹಾಕುತ್ತಾರೆ.  ಆಚೆ-ಈಚೆ ಉಳಿದಿರುವ ಬಾಳೆಪಟ್ಟಿಯನ್ನು ಕರಡದ ಮೇಲೆ ಬರುವಂತೆ  ಮಡಚುತ್ತಾರೆ.  ಅಡಿಯ ಹಾಗೂ ಮೇಲಿನ ಬಾಳೆಪಟ್ಟಿ ಸೇರಿಸಿ ಚಿಟಗು ಹಾಕುತ್ತಾರೆ.  ಮತ್ತೊಂದು ಕಡೆಯಿರುವ ನುಣಿಕರಡದ ತುದಿಯನ್ನು ಸೇರಿಸಿ ಹೆಂಗಸರು ಮುಡಿ ಕಟ್ಟುವಂತೆ ಗಂಟು ಹಾಕುತ್ತಾರೆ.  ಹೀಗೆ ಒಂದು ಕಟ್ಟು ಸಿದ್ಧ.