ಸಮುದ್ರದ ಪಾಚಿ

ಸಾರಸಗಾಮ್ ಎಂಬ ಪಾಚಿಯಲ್ಲಿ ಜೈವಿಕ ಇಂಧನವಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.  ಇದರಿಂದ ಲಿಪಿಡ್ ಹಾಗೂ ಎಣ್ಣೆಯನ್ನು ಉತ್ಪತ್ತಿ ಮಾಡಲು ಸಾಧ್ಯ.  ಈ ಪಾಚಿಯ ಬಣ್ಣ ಹಸುರು, ಕೆಂಪು ಅಥವಾ ಕಂದು.  ಇದರಲ್ಲಿ ಶೇಕಡಾ ೭೫ರಷ್ಟು ಎಣ್ಣೆ ಅಂಶವಿದೆ.  ಇದನ್ನು ಮಾಮೂಲಿ ಟ್ರಾನ್ಸ್ ಎಸ್ಟರಿಫಿಕೇಶನ್ ಮುಖಾಂತರ ಜೈವಿಕ ಡೀಸೆಲ್ ಆಗಿ ಬದಲಾಯಿಸಬಹುದಾಗಿದೆ.  ಹೀಗೆ ಮೆಕ್ಕೆಜೋಳ ಅಥವಾ ಸೋಯಾಬೀನ್‌ಗಳಿಂದ ಸಿಗುವ ಎಣ್ಣೆಗಿಂತಲೂ ನಾಲ್ಕುಪಟ್ಟು ಅಧಿಕ ಎಣ್ಣೆ ಇದರಲ್ಲಿ ಸಿಗುತ್ತದೆ ಎಂಬುದು ಅಮೇರಿಕಾದ ವಿಜ್ಞಾನಿಗಳ ಸಂಶೋಧನೆ.

ಪಾಚಿಯಲ್ಲಿ ಜೈವಿಕ ಇಂಧನವಿದೆ.  ಅದನ್ನು ಸಂಸ್ಕರಿಸಬಹುದು ಎಂಬುದು ಹೊಸ ಜೈವಿಕ ತಂತ್ರಜ್ಞಾನದ ಆವಿಷ್ಕಾರಕ್ಕೆ ಕಾರಣವಾಗಿದೆ.  ಪಾಚಿಯನ್ನು ಪ್ರಯೋಗಶಾಲೆಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.  ಇದರಲ್ಲಿ ಇರುವ ಎಣ್ಣೆ ಉತ್ಪಾದಕ ಜೀನ್ ಅನ್ನು ತೆಗೆದು ಬೇರೆ ಬೇರೆ ಪಾಚಿಗಳಿಗೂ ಸೇರಿಸುವ ಪ್ರಯತ್ನ ನಡೆಯುತ್ತಿದೆ.  ನಾಲ್ಕು ಬಹುಮುಖ್ಯ ಬಿಟಿ ಕಂಪೆನಿಗಳು ಈ ಕೆಲಸದಲ್ಲಿ ನಿರತವಾಗಿವೆ. ನಾಲ್ಕು ಸಾವಿರಕ್ಕೂ ಅಧಿಕ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.  ವೆಂಟರ್‍ಸ್ ಎಂಬ ಕಂಪೆನಿ ೩೦೦ಮಿಲಿಯನ್ ಡಾಲರ್ ಇದಕ್ಕೋಸ್ಕರ ಹೂಡಿದೆ.  ಬಿಲ್‌ಗೇಟ್ ಕಂಪೆನಿ ಕೇವಲ ೧೦೦ಮಿಲಿಯನ್ ಡಾಲರ್ ವ್ಯಯಿಸಿದೆ.

ಪಾಚಿಯು ಇಂಗಾಲದ ಡೈ ಆಕ್ಸೈಡ್ ಸೇವಿಸಿ ಆಮ್ಲಜನಕವನ್ನು ಹೊರಹಾಕುತ್ತದೆ.  ಸಮುದ್ರದ ಆಲ್ಗೆ ನೀಡುತ್ತಿರುವ ಆಮ್ಲಜನಕವನ್ನೇ ನಾವು ಹಾಗೂ ನೀವು ಸೇವಿಸುತ್ತಿರುವುದು ಎಂದು ಸಮುದ್ರತಜ್ಞ ಜೆ. ಕ್ರಯಾಗ್ ವೆಂಟರ್ ಹೇಳುತ್ತಾರೆ.  ವಾತಾವರಣದ ಬಿಸಿ ಏರುವಿಕೆಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ, ಮೀನುಗಳಿಗೆ, ಇನ್ನಿತರ ಸೂಕ್ಷ್ಮ ಜೀವಿಗಳಿಗೆ ಆಹಾರವಾದ ಪಾಚಿಗಳನ್ನು ಜೈವಿಕ ಇಂಧನವಾಗಿ ಬಳಸಕೂಡದು ಎಂಬುದು ಅಮೇರಿಕಾ ಪರಿಸರವಾದಿಗಳ ಪ್ರತಿಭಟನೆ ನಡೆದಿದೆ.

ಪಾಚಿ ಬೆಳೆಯಲು ಫಲವತ್ತಾದ ನೆಲ ಬೇಕಿಲ್ಲ.  ಸಮುದ್ರದ ಉಪ್ಪುನೀರು ಸಾಕು.  ಒಂದೊಮ್ಮೆ ಸಮುದ್ರದಲ್ಲಿ ಬೇಡವೆಂದಾದರೆ ಕೊಳಗಳನ್ನು ನಿರ್ಮಿಸಿ ಬೆಳೆಯಬಹುದು.  ಅಷ್ಟೇ ಅಲ್ಲ, ಕೊಳಚೆ ನೀರಿನಲ್ಲೂ ಬೆಳೆಯಲು ಸಾಧ್ಯ.  ಇದನ್ನೇ ಬಿಟಿ ಮೂಲಕ ಸಂಶೋಧಿಸುತ್ತಿದ್ದೇವೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಪಾಚಿಯು ಆಹಾರವೆಂದಾದಾಗ ಅದು ಜೈವಿಕ ತಂತ್ರಜ್ಞಾನದ ಮೂಲಕ ಬದಲಾವಣೆಗೆ ಒಳಗಾದರೆ ಉಂಟಾಗುವ ಅಪಾಯಗಳ ಕುರಿತು ಇನ್ನೂ ಅಧ್ಯಯನವಾಗಿಲ್ಲ.  ಒಂದೊಂದು ಪ್ರಭೇದಗಳ ಪಾಚಿಗೂ ಅದರದೇ ಆದ ಸ್ವಚ್ಛತಾ ಕೆಲಸವಿದೆ.  ಅವುಗಳು ಒಮ್ಮೆ ಮಿಶ್ರಸಂಕರಕ್ಕೊಳಗಾಗಿ ಕೇವಲ ಜೈವಿಕ ಇಂಧನವೊಂದನ್ನೇ ಉತ್ಪಾದಿಸತೊಡಗಿದರೆ ಸಮುದ್ರದ ಜೀವಿವೈವಿಧ್ಯದ ಗತಿ ಏನಾಗಬಹುದು?  ಯಾರಿಗೂ ಗೊತ್ತಿಲ್ಲ.

ಆದರೆ ಭವಿಷ್ಯದ ಇಂಧನ ಕೊರತೆ ನೀಗಿಸಲು ಇದು ಅತ್ಯಂತ ಅವಶ್ಯ.  ಹೀಗಾಗಿ ಅನಾಹುತ ಆಗದಂತೆ ನಿರ್ವಹಿಸುವ ತಂತ್ರಜ್ಞಾನವನ್ನು ಇದರೊಂದಿಗೆ ಸಂಶೋಧಿಸಲಾಗುತ್ತಿದೆ ಎಂದು ಸ್ವತಃ ಅಮೇರಿಕಾದ ಅಧ್ಯಕ್ಷರಾದ ಬರಾಕ್ ಒಬಾಮಾರವರೇ ಹೇಳಿದ್ದಾರೆ.

ಹರ್ಮಿಟ್ ಏಡಿ

ಈ ಏಡಿಯು ಸಮುದ್ರವಾಸಿ.  ಆದರೆ ಇದಕ್ಕೆ ಚಿಪ್ಪಿಲ್ಲ.  ಅದಕ್ಕಾಗಿ ಖಾಲಿ ಇರುವ ಚಿಪ್ಪುಗಳಲ್ಲಿ ಸೇರಿಕೊಂಡು ಚಿಪ್ಪುಗಳ ಮರುಬಳಕೆ ಮಾಡಿಕೊಳ್ಳುತ್ತದೆ.

ಸಾಗರಸೌತೆ

ಸಮುದ್ರದ ತಳದಲ್ಲಿ ಇದರ ವಾಸ.  ಆದರೆ ಹಗಲು ಮರಳಿನ ರಾಶಿಗೆ ಲಗ್ಗೆ.  ಅಲ್ಲಿರುವ ಪಾಚಿ ಹಾಗೂ ಸೂಕ್ಷ್ಮಜೀವಿಗಳನ್ನು ತಿಂದು ಮರಳನ್ನು ಮತ್ತೆ ಹೊರಹಾಕುತ್ತದೆ.  ಹೀಗೆ ಸಮುದ್ರದ ಮರಳು ಶುದ್ಧೀಕರಣವಾಗುತ್ತಲೇ ಇರುತ್ತದೆ.  ಒಂದು ಸಮುದ್ರಸೌತೆ ದಿನಕ್ಕೆ ೫೦ಗ್ರಾಂ ಮರಳನ್ನು ಶುದ್ಧಗೊಳಿಸುತ್ತದೆ.

ಹುಲ್ಲು ಹಾಸು

ಸಮುದ್ರ ಹುಲ್ಲುಹಾಸು ಮೀನುಗಳಿಗೆ ಆಹಾರ.  ಭಾರ ಲೋಹಗಳು, ಹಸುರುಮನೆ ಅನಿಲಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ.  ಕಡಿಮೆ ಆಳದಲ್ಲಿ ಬೆಳೆಯುತ್ತದೆ.  ಚಾಪೆಯಂತೆ ಬೇರುಗಳನ್ನು ಹರಡಿಕೊಳ್ಳುತ್ತದೆ.  ಹೂ ಬಿಡುವ ಈ ಹುಲ್ಲಿನ ಎಲೆಗಳು ಅಗಲವಾಗಿ ಚಮಚದ ಆಕಾರದಲ್ಲಿದೆ.  ಸವಕಳಿಯನ್ನು ತಡೆದು ಕೇವಲ ಸಣ್ಣಕಣಗಳು ಮಾತ್ರ ಅಡಿಯಲ್ಲಿ ಇಳಿಯುವಂತೆ ನೋಡಿಕೊಳ್ಳುತ್ತದೆ.  ಸಮುದ್ರಹುಲ್ಲು ವಾತಾವರಣದ ಶೇಕಡಾ ೧೫ರಷ್ಟು ಹಾನಿಕಾರಕ ಅನಿಲವನ್ನು ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ.