ತಾಲ್ಲೂಕು ಕೇಂದ್ರದಿಂದ = ೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ  = ೪೦ ಕಿ.ಮೀ.

ಕೊಳ್ಳೇಗಾಲ ವಲಯ ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಗಡಿ ತಾಲ್ಲೂಕು, ಪ್ರಕೃತಿ ಸಂಪತ್ತು ಬಹಳಷ್ಟಿದ್ದು ಜಲಪಾತಗಳು, ದೇವಸ್ಥಾನಗಳನ್ನು ಹೊಂದಿದೆ. ವಲಯದ ಸ್ವಲ್ಪಭಾಗ ನೀರಾವರಿ ಹೊಂದಿದೆ. ಈ ಹಿಂದೆ ಈ ಪಟ್ಟಣದಲ್ಲಿ ಕೌಹಳ ಮತ್ತು ಗಾಲವ ಎಂಬ ಇರ್ವರು ಮಹರ್ಷಿಗಳು ನೆಲೆಸಿದ್ದರಿಂದ ಇದು ಮುಂದೆ ಕೌಹಳಗಾಲವ ನಗರವಾಗಿ ಮುಂದೇ ಕೊಳ್ಳೇಗಾಲವೆಂದು ಪ್ರಸಿದ್ಧಿ ಪಡೆಯಿತು.ರೇಷ್ಮೆ ಮಾರುಕಟ್ಟೆಯನ್ನು ರೇಷ್ಮೆ ಬೆಳೆಗಾರರಿಗೆ ವರದಾನವಾಗಿದೆ.

ಕೊಳ್ಳೇಗಾಲದ ಚಾರಿತ್ರಿಕ ಮುಖವನ್ನು ಅವಲೋಕಿಸಿದರೆ ಜನಪದ ನಾಯಕರಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಸತ್ ಸಂಕಲ್ಪಗಳಿಗೆ ಸದಾ ಪ್ರೇರಣೆ ನೀಡುತ್ತಿರುವ ಮಲೆಯ ಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿಯಂತಹ ಜಂಗಮ  ಶ್ರೇಷ್ಠರು ನಡೆದಾಡಿದ ಪುಣ್ಯಭೂಮಿ.

ನಾಡಿನ ಹಿರಿಯ ಕವಿ ಷಟ್ ಶಾಸ್ತ್ರ ಕೋವಿದ ಶ್ರೀ ನಿಜಗುಣಶಿವಯೋಗಿ ನಂತರದ ಶ್ರೀ ಕುಮಾರ ನಿಜಗುಣಸ್ವಾಮಿ ಹಾಗೂ ಡಾ. ರಾಜ್‌ಕುಮಾರ್ ಸಿಂಗಾನಲ್ಲೂರಿನವರಾಗಿದ್ದು  ಇವರೆಲ್ಲರಿಂದ ಸಾಂಸ್ಕೃತಿಕವಾಗಿ ಶ್ರೀಮಂತಗೊಂಡ ಪ್ರದೇಶವಾಗಿದೆ.

 

ಮರಡಿಗುಡ್ಡ :


ಪವಾಡ ಪುರುಷ ಶ್ರೀ ಮಹದೇಶ್ವರರು ಮಂಡಿ ಊರಿದ ಸ್ಥಳ ಮರಡಿಗುಡ್ಡವಾಗಿದೆ.

ಬಸ್ತೀಪುರ : ಪಟ್ಟಣದ ಉತ್ತರ ದಿಕ್ಕಿನಲ್ಲಿದ್ದು, ಜೈನ ಬಸದಿಗಳಿದ್ದ ಪುರಾವೆಗಳಿವೆ.

ಇತರೆ ಸ್ಥಳಗಳು : ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನ, ಮಾಳಿಗೆ ಮಾರಮ್ಮ, ಸೋಮೇಶ್ವರ ಸ್ವಾಮಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ, ಮುರುಡೇಶ್ವರ ಸ್ವಾಮಿ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಉಚ್ಛಾಲಮ್ಮ ದೇವಸ್ಥಾನ, ಮಕ್ಕಳ ಮಹದೇಶ್ವರ ದೇವಸ್ಥಾನ, ನಾರಾಯಣ ಸ್ವಾಮಿ ದೇವಸ್ಥಾನ ಹಾಗೂ ಕಲ್ಯಾಣಿ.

 

ಚಿಲಕವಾಡಿ

ತಾಲ್ಲೂಕು ಕೇಂದ್ರದಿಂದ  = ೧೨ ಕಿ.ಮೀ.
ಜಿಲ್ಲಾ ಕೇಂದ್ರದಿಂದ  = ೫೨ ಕಿ.ಮೀ.

 

ಇದೊಂದು ಧಾರ್ಮಿಕ ಹಾಗೂ ಕವಿಗಳ ಊರು. ಇಲ್ಲಿ ಶ್ರೀ ಶಂಭುಲಿಂಗೇಶ್ವರರ ಬೆಟ್ಟವಿದ್ದು, ದುರ್ಗಾಂಭ ದೇವಿಯ ದೇವಸ್ಥಾನ ಕೂಡ ಇದೆ. ದೀಪಾವಳಿಯ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಸ್ವಾಮಿಯ ಉತ್ಸವ ನಡೆಯುತ್ತಿದ್ದು, ಜಾತ್ರೆ ಕೂಡ ಏರ್ಪಾಡಾಗುತ್ತದೆ.

ದೇವಸ್ಥಾನದ ಸಮೀಪದಲ್ಲಿ ಅನುಭವ ಮಂಟಪ ಇದ್ದು, ಕುಮಾರ ನಿಜಗುಣ ಸ್ವಾಮಿಗಳವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇವರು ಬರೆದ ’ಬೋಳು ಬಸವನ ಬೊಂತೆ” ಒಂದು ಅಮರ ಕೃತಿ. ಇವರು ಸಂಸಾರಿಕ ಜೀವನವನ್ನು ತ್ಯಜಿಸಿ, ಶ್ರೀ ಸಿದ್ಧಗಂಗೆಯ ಡಾ. ಶಿವಕುಮಾರ್ ಸ್ವಾಮೀಜಿಗಳವರಿಂದ ದೀಕ್ಷೆಯನ್ನು ಪಡೆದು ವಿರಕ್ತಿ ಮಾರ್ಗದೆಡೆಗೆ ನಡೆದಿದ್ದಾರೆ. ಈ ಸ್ಥಳದಲ್ಲಿ ಶ್ರೀ ನಿಜಗುಣಶಿವಯೋಗಿಗಳು ತಪೋಗೈದ ಗುಹೆ ಇದೆ.

 

ಕುಂತೂರು

ತಾಲ್ಲೂಕು ಕೇಂದ್ರದಿಂದ = ೧೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ = ೫೦ ಕಿ.ಮೀ. ಕುಂತೂರು

ಈ ಗ್ರಾಮದಲ್ಲಿ ಶ್ರೀ ಪ್ರಭುದೇವಸ್ವಾಮಿಯವರ ಬೆಟ್ಟ ಇದ್ದು, ವರ್ಷಕ್ಕೊಮ್ಮೆ ಸ್ವಾಮಿಗೆ ಹಾಲರವೆ ಉತ್ಸವ ಹಾಗೂ ಜಾತ್ರೆ ನಡೆಯುತ್ತದೆ.

ಬೆಟ್ಟದ ತಪ್ಪಲಿನ ಪರಿಸರದಲ್ಲಿ ಶ್ರೀ ಮಹದೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ ಇದ್ದು, ಈವಾಗ ಶ್ರೀ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸುತ್ತಮುತ್ತಲಿನ ಕಬ್ಬು ಬೆಳೆಗಾರರಿಗೆ ವರದಾನವಾಗಿದೆ. ಇಲ್ಲಿ ಕಾರ್ಖಾನೆಯ ನೌಕರರಿಗೆ ವಸತಿಗೃಹಗಳಿದ್ದು, ಕಾಲೋನಿಯೊಂದು ನಿರ್ಮಾಣಗೊಂಡಿದೆ.

ಊರಿನ ಕೇಂದ್ರಸ್ಥಳದಲ್ಲಿ ದಾಸೋಹ ಮಠವಿದ್ದು, ಈ ಮಠದಲ್ಲಿ ಹಿಂದೆ ಪುರುಷ ಶ್ರೀ ಮಾದೇಶ್ವರರವರು ಬಂದು ಹೋಗಿದ್ದ ಐತಿಹ್ಯವಿದೆ. ಶ್ರೀ ಮಠದಲ್ಲಿ ಅನ್ನದಾಸೋಹ ನಡೆಯುತ್ತದೆ.

ಹೊಂಡರಬಾಳು ಶ್ರೀ ಸಿದ್ಧೇಶ್ವರ ಕ್ಷೇತ್ರ

ತಾಲ್ಲೂಕು ಕೇಂದ್ರದಿಂದ = ೩ ಕಿ.ಮೀ.
ಜಿಲ್ಲಾ ಕೇಂದ್ರದಿಂದ = ೪೩ ಕಿ.ಮೀ.

ಹೊಂಡರಬಾಳು ಶ್ರೀ ಸಿದ್ಧೇಶ್ವರ ಕ್ಷೇತ್ರವು ಪುರಾಣ ಪ್ರಸಿದ್ಧವಾದ ಸ್ಥಳವಾಗಿದೆ. ಗಿರಿಯಲ್ಲಿ ಗುಹೆಗಳು ಅಧಿಕವಾಗಿವೆ. ತುಟ್ಟತುದಿಯಲ್ಲಿರುವ ಮೊದಲ ಗುಹೆ ವಿಶಾಲವಾದುದು.  ಪೂಜಾ ಬಾಗಿಲು, ದರ್ಶನ ಬಾಗಿಲು, ಸ್ವರ್ಗದ ಬಾಗಿಲು ಈ ರೀತಿ ೦೩ ಬಾಗಿಲುಗಳಿವೆ. ಪೂಜೆಯನ್ನು ಭಕ್ತರು ದರ್ಶನದ ಬಾಗಿಲ ಹತ್ತಿರ ಬಂದು ಮಾಡಿಸುತ್ತಾರೆ. ಸ್ವರ್ಗದ ಬಾಗಿಲ ಬಗ್ಗೆ ಒಂದು ದಂತಕಥೆಯಿದ್ದು, ಒಮ್ಮೆ ಮಕ್ಕಳಿಲ್ಲದ ದಂಪತಿಗಳು ಮಗುವಾದರೆ ಅದನ್ನು ಅದರ ಆಭರಣ ಉಡುಪಿನ ಜೊತೆ ನಿನಗರ್ಪಿಸುತ್ತೇವೆಂದು ವಿಚಿತ್ರ ಹರಕೆ ಹೊತ್ತರು. ಮಗುವಾಯಿತು. ಬಹಳ ದಿನಗಳ ನಂತರ ಮಗುವನ್ನು ಸಿಂಗರಿಸಿ ದೇವರ ದರ್ಶನಕ್ಕೆ ಹೋದರು. ಮಗು ಸ್ವರ್ಗದ  ಬಾಗಿಲಲ್ಲಿ ಹೋಗಿ ಮತ್ತೆ ಹಿಂತಿರುಗಲಿಲ್ಲ. ಈಗಲೂ ವಿಇಂμಂ ಸಂದರ್ಭದಲ್ಲಿ ಗುಹೆಯಲ್ಲಿ ಮಗುವಿನ ಗೆಜ್ಜೆಯ ಸದ್ದು ಕೇಳಿಸುವುದೆಂದು ಪ್ರತೀತಿ ಇದೆ.

 

ಕುರುಬನ ಕಟ್ಟೆ

ತಾಲ್ಲೂಕು ಕೇಂದ್ರದಿಂದ  = ೮ ಕಿ.ಮೀ.
ಜಿಲ್ಲಾ ಕೇಂದ್ರದಿಂದ  = ೫೮ ಕಿ.ಮೀ.

ಕೊಳ್ಳೇಗಾಲದ ಪಕ್ಕದಲ್ಲಿರುವ ಕುರುಬನ ಕಟ್ಟೆಯು ಶೀ ಮಂಟೆಸ್ವಾಮಿ ಯವರು ತಪಗೈದ ಸ್ಥಳ. ಇಲ್ಲಿ ಸೋಮವಾರ ಮತ್ತು ಶುಕ್ರವಾರ ವಿಶೇಷ  ಪೂಜೆಗಳು ನಡೆಯುತ್ತದೆ. ಪರಮ ಪರಂಜ್ಯೋತಿ ನೀವೇ ಬನ್ನಿ, ಮಂಟೇದ ಲಿಂಗಯ್ಯ ನೀವೇ ಬನ್ನಿ ಎಂದು ಹಾಡುವ ನೀಲಗಾರರ ಮೇಳ ಈ ಸ್ಥಳದಲ್ಲಿ ಕಾಣಬಹುದು. ಈ ಸ್ಥಳದ ಪಕ್ಕದಲ್ಲಿ ಕರಳಕಟ್ಟೆ ಎಂಬ ಗ್ರಾಮವಿದ್ದು, ಸೋಲಿಗರು ಇಲ್ಲಿ ವಾಸವಾಗಿದ್ದಾರೆ.

  

ಕನಕಗಿರಿ ಕ್ಷೇತ್ರ

ತಾಲ್ಲೂಕು ಕೇಂದ್ರದಿಂದ  = ೯ ಕಿ.ಮೀ.
ಜಿಲ್ಲಾ ಕೇಂದ್ರದಿಂದ  = ೫೯ ಕಿ.ಮೀ.

ಕ್ಷೇತ್ರವು ದೊಡ್ಡಿಂದವಾಡಿ ಗ್ರಾಮದ ಸನಿಹದಲ್ಲಿರುವ ಗಿರಿ ಪ್ರದೇಶ ಇಲ್ಲಿ ಪಾರ್ವತಿ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ. ಪಂಚಲಿಂಗ ದರ್ಶನದಂದು ತಲಕಾಡಿನ ೦೫ ಲಿಂಗಗಳನ್ನು ದರ್ಶನ ಮಾಡಿ, ಕನಕಗಿರಿಯ ಪಾರ್ವತಿ-ಪರಮೇಶ್ವರರ ದರ್ಶನ ಪಡೆದರೆ ಕೈಲಾಸ ಪದವಿ ಪ್ರಾಪ್ತವಾಗುವುದೆಂದು ಪ್ರತೀತಿ ಇದೆ. ಆದ್ದರಿಂದಾಗಿ ಈ ದೇವರ ದರ್ಶನ ಪಡೆಯಲು ಭಕ್ತಾದಿಗಳು ಹೆಚ್ಚಾಗಿ ಬರುತ್ತಿದ್ದಾರೆ. ಇದೊಂದು ವೈದಿಕ ಮತ್ತು ಜಾನಪದ ಸಾಂಸ್ಕೃತಿಕ ಆಚರಣೆಯ ಸಂಗಮ, ಇಲ್ಲಿನ ಮಲ್ಲಿಕಾರ್ಜುನ ಸ್ವಾಮಿ  ದೇವಸ್ಥಾನ ವೈದಿಕ ಪರಂಪರೆಯನ್ನು ಪ್ರತಿನಿಧಿಸಿದರೆ ’ಶ್ರೀ ಗುಡ್ಡದ ಮಾರಮ್ಮನ ದೇವಸ್ಥಾನ ಜಾನಪದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿರುವ ಕೆಂಡಗಣ್ಣ ಸ್ವಾಮಿಗಳ ಗದ್ದುಗೆಯೂ ಪ್ರಮುಖವಾದುದಾಗಿದೆ.

 

ಗುಂಡಾಲ್ ಜಲಾಶಯ

ತಾಲ್ಲೂಕು ಕೇಂದ್ರದಿಂದ  = ೨೭ ಕಿ.ಮೀ.
ಜಿಲ್ಲಾ ಕೇಂದ್ರದಿಂದ  = ೬೭ ಕಿ.ಮೀ.

ಕೊಳ್ಳೇಗಾಲದಿಂದ ಲೊಕ್ಕನ ಹಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಎದುರಾಗುವುದೇ ಗುಂಡಲ್ ಅರಣ್ಯ. ಇಲ್ಲಿ ಬೆಟ್ಟ ಗುಡ್ಡಗಳಿವೆ, ಅಡ್ಡಲಾಗಿ ಆಕರ್ಷಕವಾಗಿ ಜಲಾಶಯವನ್ನು ನಿರ್ಮಿಸಲಾಗಿದೆ. ಸುಂದರ ಪರಿಸರ ಬಯಸುವವರಿಗೆ ಇದು ಅಚ್ಚುಮೆಚ್ಚಿನ ತಾಣವಾಗಿದೆ. ವಾಸ್ತವ್ಯಕ್ಕೆ ಪ್ರವಾಸಿ ಬಂಗಲೆಯಿದೆ. ಈ ಜಲಾಶಯದಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.

 

ಚಿಕ್ಕಲ್ಲೂರು

ತಾಲ್ಲೂಕು ಕೇಂದ್ರದಿಂದ  = ೨೭ ಕಿ.ಮೀ.
ಜಿಲ್ಲಾ ಕೇಂದ್ರದಿಂದ  = ೬೭ ಕಿ.ಮೀ.

ಶ್ರೀ ಚಕ್ಕಲ್ಲೂರು  ಪುಣ್ಯಕ್ಷೇತ್ರವು ಧರೆಗೆ ದೊಡ್ಡವರು ಮಂಟೇಸ್ವಾಮಿಯವರ ಶಿಷ್ಯರಾದ ಸಿದ್ದಪ್ಪಾಜಿಯವರು ಐಕ್ಯವಾದ ಸ್ಥಳವಾಗಿದೆ. ಪವಾಡ ಪುರುಷ ಶ್ರೀ ಸಿದ್ದಪ್ಪಾಜಿಯವರು ನಿಡುಗಟ್ಟ ಗ್ರಾಮದ ಮುದ್ದೋಜಿ ಲಿಂಗವಂತ ಪಂಚಾಳದವರು, ಆತನ ಕಿರಿಯ ಮಗ ಕೆಂಪಣ್ಣ ಮಂಟೇಸ್ವಾಮಿಯ ಶಿಷ್ಯರಾಗಿ ಅನೇಕ ಪವಾಡಗಳನ್ನು ಮೆರೆಸಿ, ಕೊನೆಯಲ್ಲಿ ಚಿಕ್ಕಲ್ಲೂರು ಬಂದು ಐಕ್ಯವಾಗುತ್ತಾರೆ. ಈ ಕ್ಷೇತ್ರದಲ್ಲಿ ಪ್ರತೀ ವರ್ಷ ಜನವರಿ ಮಾಸದಲ್ಲಿ ಬರುವ ಪೌರ್ಣಿಮೆ ದಿನ ಸಂಕ್ರಾಂತಿಯ ಸಮಯದಲ್ಲಿ ಚಂದ್ರಮಂಡಲ ಆರಂಭದಿಂದ ಪಂತಿ ಸೇವೆಯಲ್ಲಿ ಮುಕ್ತಾಯವಾಗುವ ೦೫ ದಿನಗಳ ಜಾತ್ರೆ ನಡೆಯುತ್ತದೆ. ಪ್ರತೀ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ಕಾವೇರಿ ನದಿಯು ಸನಿಹದಲ್ಲಿ ಹರಿಯುತ್ತದೆ. ಸಮೀಪದಲ್ಲಿಯೇ ಮುತ್ತತ್ತಿರಾಯನ ಕ್ಷೇv  ಇದೆ.

 

ಉಗನಿಯ

ತಾಲ್ಲೂಕು ಕೇಂದ್ರದಿಂದ  = ೧೨ ಕಿ.ಮೀ.
ಜಿಲ್ಲಾ ಕೇಂದ್ರದಿಂದ  = ೫೨ ಕಿ.ಮೀ.

ವಾಸವಾಡಿ ಶ್ರೀ ವೀರಭದ್ರೇಶ್ವರ ಸ್ವಾಮಿ ಸನ್ನಿಧಿ : ಕೊಳ್ಳೇಗಾಲದಿಂದ ಬೆಂಗಳೂರು ರಸ್ತೆಯಲ್ಲಿ ಕ್ರಮಿಸಿ ಧನಗೆರೆ ಊರಿನಿಂದ ಸ್ವಲ್ಪದೂರ ಮುಂದೆ ಹೋದಾಗ ಒಂದು ಕಚ್ಚಾ ರಸ್ತೆಯ ಮೂಲಕ ತಲುಪಿದಾಗ ಸಿಗುವ ಭವ್ಯ ದೇವಾಲಯ ಶ್ರೀ ವಾಸವಾಡಿ ವೀರಭದ್ರೇಶ್ವರ ಸನ್ನಿದಿ ಹಲವಾರು ಭಕ್ತರ ಸಮೂಹ ಹೊಂದಿರುವ ಅತಿ ಪುರಾತನ ದೇವಾಲಯ ಇದಾಗಿದೆ. ದೇವಾಲಯದಲ್ಲಿ ತಯಾರಿಸಿ ನೀಡುವ ಅನ್ನ ಚಟ್ನಿ ತುಂಬಾ ವಿಶೇಷವಾದ  ಪ್ರಸಾದವಾಗಿದೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಅನ್ನಬ್ರಹ್ಮೋತ್ಸವವ ನಡೆಯಲಿದ್ದು ತುಂಬಾ ಸಂಖ್ಯೆಯ ಭಕ್ತಾದಿಗಳು ಸೇರಿ ರಾತ್ರಿ ಪೂರ್ತಿ ಜಾಗರಣೆ ಮಾಡುತ್ತಾರೆ. ದೇವಾಲಯದ ಪಕ್ಕದಲ್ಲಿ ಕೆರೆ ಇದ್ದು ಸುತ್ತಲಿನ ಪರಿಸರ  ಸುಂದರ ಹಾಗೂ ಆಕರ್ಷಣೀಯವಾಗಿದೆ.

 

ಶಿವನ ಸಮುದ್ರ

ತಾಲ್ಲೂಕು ಕೇಂದ್ರದಿಂದ  = ೧೮ ಕಿ.ಮೀ.
ಜಿಲ್ಲಾ ಕೇಂದ್ರದಿಂದ  = ೫೮ ಕಿ.ಮೀ.

 

ಕಾವೇರಿ ನದಿ ತೀರದಲ್ಲಿದೆ. ಇಲ್ಲಿನ ವೈಷ್ಣವ, ಶೈವ ಹಾಗೂ ಶಕ್ತಿ ದೇವತೆಗಳಿಗೆ ಸೋಮೇಶ್ವರ ದೇವಾಲಯ ಬಹಳ ಪ್ರಾಚೀನವಾದ ದೇವಾಲಯ. ಇದರ ಸಮೀಪ ಶಕ್ತಿ ದೇವತೆ ಶಿವನ ಸಮುದ್ರ ಮಾರಮ್ಮ ಬಹಳ ಪ್ರಸಿದ್ಧ ದೇವಾಲಯ. ಭಯ- ಭಕ್ತಿಯಿಂದ ಜನರು ಇಲ್ಲಿಗೆ ಬಂದು, ಹೊತ್ತ ಹರಕೆಯನ್ನು ತೀರಿಸುವ ವಾಡಿಕೆ ಇಂದಿಗೂ ಕಂಡು ಬರುತ್ತದೆ.

ವೈಷ್ಣವ ದೇವಾಲಯವಾದ ವೆಂಕಟರಮಣ ಸ್ವಾಮಿ ದೇವಸ್ಥಾನ ಬಹಳ ವಿಶಾಲವಾದುದು. ಶಯನ ಭಂಗಿಯಲ್ಲಿರುವ ವಿಷ್ಣುವಿನ ಮೂರ್ತಿ ಇದೆ. ಇದಕ್ಕೆ ಮಧ್ಯರಂಗ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಹೊಂದಿದೆ. ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದ ಮಧ್ಯರಂಗ, ತಮಿಳುನಾಡಿನ ಶ್ರೀರಂಗಂನ ಅಂತ್ಯರಂಗವನ್ನು ಸೂರ್ಯೋದಯದಿಂದ- ಸೂರ್ಯಾಸ್ತದವರೆಗೆ ನೋಡಿದವರಿಗೆ ಪುಣ್ಯ ಬರುತ್ತದೆ ಎಂದು ಪ್ರತೀತಿ ಇದೆ. ಪ್ರತೀ ವರ್ಷ ಜಾತ್ರೆ ಸೇರು  ನಡೆಯುತ್ತದೆ. ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀಚಕ್ರವಿದೆ.


ವೆಸ್ಲಿ ಸೇತುವೆ

 

ಶಿವನಸಮುದ್ರ ಪ್ರದೇಶದಲ್ಲಿ ಕಾವೇರಿನದಿಗೆ ಅಡ್ಡಲಾಗಿ ೩ ಸೇತುವೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವೆಸ್ಲೆ ಸೇತುವೆ ಹಳೆಯಕಾಲದ ಇಂಜಿನಿಯರಿಂಗ್ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

 

ಬೂದಬಾಳು ಕ್ಷೇತ್ರ

ತಾಲ್ಲೂಕು ಕೇಂದ್ರದಿಂದ = ೧೮ ಕಿ.ಮೀ.
ಜಿಲ್ಲಾ ಕೇಂದ್ರದಿಂದ  = ೫೮ ಕಿ.ಮೀ.

ಬೂದಬಾಳು : ಕೊಳ್ಳೇಗಾಲ ತಾಲ್ಲೂಕಿನ ಬೂದಬಾಳು ಗ್ರಾಮದಲ್ಲಿ ಗುಡಿಹಟ್ಟಿ ವೆಂಕರಮಣಸ್ವಾಮಿ ಪ್ರಸಿದ್ಧ ದೇವಾಲಯವಿದೆ. ಇದು ಈ ಭಾಗದಲ್ಲಿ ಚಿಕ್ಕ ತಿರುಪತಿ ಎಂದು ಹೆಸರಾಗಿದೆ. ವರ್ಷದಲ್ಲಿ ಒಮ್ಮೆ ಜಾತ್ರೆ ನಡೆಯುತ್ತದೆ. ಇದು ಮೂರು ದಿನಗಳ ಜಾತ್ರೆಯಾಗಿದ್ದು ಮೊದಲ ದಿನ ತೇರು, ಎರಡನೇ ದಿನ ವಧೆ ಅಥವಾ ರಾಕ್ಷಸನ ಸಂಹಾರ. ಮೂರನೇ ದಿನ ವಸಂತೋತ್ಸವ ನಡೆಯುತ್ತದೆ. ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.


ದರ್ಗ

ತಾಲ್ಲೂಕು ಕೇಂದ್ರದಿಂದ  = ೨೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ  = ೬೦ ಕಿ.ಮೀ.

ಮುಸಲ್ಮಾನರ ಪವಿತ್ರ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರ. ಭೋರ್ಗರೆದು ಧುಮ್ಮಿಕ್ಕುವ ಕಾವೇರಿ ತಟದಲ್ಲಿದ್ದು, ಗಗನಚುಕ್ಕಿ ಜಲಪಾತವನ್ನು ಉಂಟು ಮಾಡುವ ಸ್ಥಳವಾಗಿದೆ. ಈ ಜಲಾಶಯ ಉಕ್ಕಿ ಹರೆಯುವ ನೀರಿನಿಂದ ರಮ್ಯ ಮನೋಹರವಾಗಿದೆ. ಈ ತಟದಿಂದ ನಿಂತು ನೋಡಿದರೆ ವಿಶ್ವವಿಖ್ಯಾತ ಏಷ್ಯಾ ಖಂಡದ ಪ್ರಪ್ರಥಮ ಜಲ ವಿದ್ಯುತ್ ಸ್ಥಾವರವಾದ ಬ್ಲಫ್‌ನ ಸುಂದರ ನೋಟ ಕಾಣಿಸುತ್ತದೆ. ಈ ದರ್ಗ ಹಿಂದು-ಮುಸಲ್ಮಾನರ ಐಕ್ಯದ ಸಂಕೇತವನ್ನು ಸೂಚಿಸುವ ಸ್ಥಳವಾಗಿದೆ.

 

ಭರಚುಕ್ಕಿ

ಇಲ್ಲಿಂದ ಸ್ವಲ್ಪ ದೂರ ಮುಂದೆ ಹೋದಾಗ ಜಗತ್ತಿನಲ್ಲಿಯೇ ಅಪರೂಪದ ಭೂಸೃಷ್ಟಿಯ ಅಚ್ಚರಿ ಕಾವೇರಿಯ ಆರ್ಭಟ ಭರಚುಕ್ಕಿ ಜಲಪಾತವಿದೆ.

ಇಲ್ಲಿ ಸುಮಾರು ೧ ಕಿ.ಮೀ. ಅಗಲವಾಗಿ ಮೈದೆಳೆದಿರುವ ಕಾವೇರಿ ಸುಮಾರು ೭೫ ರಿಂದ ೧೦೦ ಅಡಿಯವರೆಗೆ ಭೂಮಿಯಿಂದ ಭೂಮಿಗೆ ದುಮ್ಮಿಕ್ಕುವಳು.

ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತ ವಿಶ್ವದ ಜಲಪಾತಗಳಲ್ಲಿ ೮೩ನೇ ಸ್ಥಾನವನ್ನು ಪಡೆದಿದೆ.

 

ಯಡಕುರಿಯ

ತಾಲ್ಲೂಕು ಕೇಂದ್ರದಿಂದ  = ೧೪ ಕಿ.ಮೀ.
ಜಿಲ್ಲಾ ಕೇಂದ್ರದಿಂದ  = ೫೪ ಕಿ.ಮೀ.

ಚಾಮರಾಜನಗರ ಜಿಲ್ಲೆಯ ಏಕೈಕ ದ್ವೀಪ ಸ್ಥಳ. ಕಾವೇರಿ ನದಿಯು ತಲ ಕಾವೇರಿಯಲ್ಲಿ ಉಗಮವಾಗಿ ತಾನು ಹರಿಯುವ ಉದ್ದಕ್ಕೂ ವೈಚಿತ್ರಗಳನ್ನು ಸೃಷ್ಟಿಮಾಡುತ್ತದೆ. ಇಂತಹ ವೈಚಿತ್ರ್ಯಗಳಲ್ಲಿ ಯಡಕುರಿಯ ಕೂಡ ಒಂದು. ಇಲ್ಲಿ ಕಾವೇರಿ ನದಿ ಕವಲೊಡೆದು ಎರಡು ಭಾಗಗಳಾಗಿ ಮುಂದೆ ಮತ್ತೆ ಒಂದಾಗಿ ಸೇರುತ್ತದೆ. ಈ ಒಂದಾಗಿ ಸೇರುವ ಸ್ಥಳಕ್ಕೆ ಕೂಡುಮೂಲೆ ಎಂದು ಅಲ್ಲಿನ ಜನರು ಕರೆಯುತ್ತಾರೆ. ಯಡಕುರಿಯ ಸುತ್ತಲೂ ನೀರಿನಿಂದ ಸುತ್ತುವರಿದ ದ್ವೀಪ ಊರು. ಊರಿಗೆ ಹೋಗಲು ಹರಿಗೋಲೆ ಬೇಕು. ಅಂಬಿಗಣ್ಣನ ಅಪ್ಪಣೆ ಇಲ್ಲದೆ ಊರಿಗೆ ಪ್ರವೇಶವಿಲ್ಲ. ಇಲ್ಲಿಗೆ ವಿಶೇಷವಾಗಿ ಪಕ್ಷಿಗಳು ವಲಸೆ ಬರುವುದನ್ನು ಕಾಣಬಹುದು.