ಕುಹೂ ಕುಹೂ ಕೋಗಿಲೆ !
ಅಯ್ಯೋ ಪಾಪ ಏನು ಕತೆ
ಯಾರಿಗಾಗಿ ನಿನ್ನ ವ್ಯಥೆ ?

ತೊಟ್ಟ ತೊಟಕು ಜಿನುಗು ಮಳೆ
ಆಷಾಢದಿ ಕದಡಿದಿಳೆ
ಇಲ್ಲ ಚೂರೂ ಬಿಸಿಲಿನೆಳೆ
ಆದರಿಂಥ ಹೊತ್ತಿನೊಳೇ
ಯಾಕೆ ಹೀಗೆ ಕಿರುಚುವೆ
ಬಂದ ದಾರಿ ಹಿಡಿದು ನಡೆ.

ಕವಿಸಮಯಕೆ ಇದು ವಿರುದ್ಧ
ಈ ಕಾಲಕೊ ಇದು ನಿಷಿದ್ಧ ;
ಪಾಪ, ನಿನಗೆ ಏನು ಗೊತ್ತು
ಏನು ಬಂತೋ ನಿನಗೆ ಹೊತ್ತು
ಮಳೆಯಲ್ಲೂ ಕಿರುಚುವೆ
ನೆಮ್ಮದಿಯನೆ ಪರಚುವೆ.

ಒಂದು ವೇಳೆ ಆ ವಸಂತ-
ಮಾಸದಲ್ಲೆ ನೀ ಹಾಡಲು
ಕೇಳುವ ಕವಿಯಿಲ್ಲವೀಗ ;
ನಿನ್ನ ಕುರಿತು ಕವಿತೆ ಬರೆದು
ಓದುವುದೂ ಸಲ್ಲದೀಗ.
ಅಯ್ಯೋ ನಿನಗೆ ಹೇಗೆ ಗೊತ್ತು
ಸಾಹಿತ್ಯದೊಳಾದ ಕ್ರಾಂತಿ !

ಕೋಗಿಲೆ ದನಿ ಹೃದ್ಯ ನಿಜ
ಅದನು ಕುರಿತು ಪದ್ಯ ವಜಾ
ಭಂಡಬಿದ್ದು ಬರೆವ ಕವಿಗೆ
ವಿಮಶಕರ ಕಠಿಣ ಸಜಾ,
ಹೀಗಾಗಿದೆ ಕವಿಯ ಸ್ಥಿತಿ
ನಿನ್ನ ಹಾಡಿಗೆಲ್ಲಿ ಗತಿ ?

ಹಳೆಗಾಲದ ವಸ್ತು ನೀನು,
ನೀನು ಹೇಗೆ ಕೂಗಲೇನು ?
ನಿನ್ನ ದನಿಯೊ ಅದೇ ರಾಗ,
ವ್ಯತ್ಯಾಸವೆ ಇಲ್ಲವಲ್ಲೊ !
ಹೊಸ ಕಾಲಕೆ ತಕ್ಕ ಹಾಗೆ
ರೈಲು-ಕಾರು-ಮಿಲ್ಲು ಹೀಗೆ
ಕೂಗುವುದನು ಕಲಿಯಲಿಲ್ಲ
ಹೊಸ ಕವಿಗಳ ಸೆಳೆಯಲಿಲ್ಲ.
ತಡವಾದರು ಚಿಂತೆಯಿಲ್ಲ
ಈಗಾದರು ನೋಡಿ ಕಲಿ
ಏನಾದರೂ ಆಗಲಿ.

ಪಾಪ, ನಿನಗೆ ತಿಳಿಯಲಿಲ್ಲ,
ಪಕ್ಷಿ ಮಹಾಸಂಘದಲ್ಲಿ
ಚುನಾವಣೆಯ ಗಡಿಬಿಡಿ,
ನೀನು ಕೂಡ ಮೆಂಬರಾಗಿ
ಏನಾದರು ಜಾಗ ಹಿಡಿ
ಹಾಗಾದರೆ ನಿನಗೆ ಸ್ಥಾನ
ಅದಕೆ ತಕ್ಕ ಹಾಗೆ ಮಾನ.

ಇದನು ಕೇಳಿ ಈಗಾದರು
ಹೊಂದಿ ನಡೆವ ಬಾಳ ಕಲಿ,
ನಿನ್ನ ಕುರಿತು ಯಾರೊಬ್ಬರು
ಪದ್ಯ ಬರೆಯರಿದನು ತಿಳಿ.
ಹೇಳಬೇಡ ಯಾರಿಗೂ
ನಾನೀತೆರ ನಿನ್ನ ಕುರಿತು
ಅನುಕಂಪೆಗೆ ಪದ್ಯ ಬರೆದು
ಇಟ್ಟುಕೊಂಡ ಸುದ್ದಿಯ
ನೂರು ಬಗೆಯ ಅನುಭವದಲಿ
ಕಲಿಯಬೇಕು ಬುದ್ಧಿಯ.