ದಿಗಂತದಿಂದೆ ದಿಗಂತಕೆ ಹಬ್ಬಿದೆ
ವಿಶ್ವವ ತಬ್ಬಿದೆ
ರುಂದ್ರ ರಾತ್ರಿ!
ಸಾಂದ್ರ ತಮಂಧದಿ ಮುಳುಮುಳುಂಗುತೆ ಕರಂಗಿದೋಲಿದೆ ಧಾತ್ರಿ!
ವಿಶಾಲ ವ್ಯೋಮದಿ ತಾರೆಗಳಿಲ್ಲ,
ಶಶಿಯಿಲ್ಲ,
ಕಾಂತಿಯ ಕಣವಿಲ್ಲ!
ಜಗತ್ತು
ಪ್ರಜ್ಞೆಯಿಲ್ಲದೆ ಶೂನ್ಯಮಹಾಶವ ಬಿದ್ದವೊಲಿದ್ದತ್ತು!

ಹುಸಿಮಮತೆ,
ಇಂದ್ರಿಯ ಲೋಲುಪತೆ,
ಮೌಢ್ಯದ ಸಂತೃಪ್ತಿ,
ಅಜ್ಞಾನದ ಸುಪ್ತಿ;
ಭಕ್ತಿಯ ಹೆಸರನು ಧರಿಸುತೆ ಮೆರೆಯುವ ಚಿತ್ತದ ದಾಸ್ಯ;
ದೇವರ ಗುಡಿ ಎಂಬುವ ಸೆರೆಯಲ್ಲಿ
ಸ್ವಾತಂತ್ರ್ಯದ ಶವಸಂಸ್ಕಾರದ ಪರದೆಯ ಮರೆಯಲ್ಲಿ
ಪೂಜೆಯ ನಕಲಿಯ ಪರಿಹಾಸ್ಯ!
ಶಾಸ್ತ್ರದ ಆಚಾರದ ಧರ್ಮದ ಕಬ್ಬಿಣನೇಣು,
ಸಿಲುಕಿಹುದದರಲಿ ಮನವನಮೃತಾತ್ಮದ ಗೋಣು!

ಇರೆ ಇಂತುಟು ಭುವನದ ಬಾಳು,
ಅದೊ ನೋಡದೊ ಕೇಳು:
ನಿದ್ರೆಯ ಕದಡಿದೆ ಅವತಾರನ ತೂರ್ಯದ ವಾಣಿ;
ಕಂಪಿಸುತಿದೆ ಜಡತೆಯೊಳದ್ದಿದ ಕ್ಷೋಣಿ!
ದಕ್ಷಿಣ ಹಸ್ತದಿ ಪ್ರಜ್ವಲಿಸುತ್ತಿದೆ ಉರಿವ ಹಿಲಾಲು,
ಕತ್ತಲೆಯನು ಕತ್ತರಿಸುವ ಬೆಂಕಿಯ ಕರವಾಳು!

ಮೌಢ್ಯ ಕಾನನಕೆ ಬಂಕಿಯ ಹೊತ್ತಿಸಿ
ತಿಮಿರ ಸಮುದ್ರವ ಶೋಷಿಸಿ ಬತ್ತಿಸಿ
ಪ್ರಸರಿಸಿ ಜ್ವಾಲಾಜ್ಯೋತಿಯ ನಡೆದಿರೆ ಅವತಾರನು ಮುಂದೆ,
ಅದೊ ಹೊರಟನು ಪೂಜರಿಯು ಹಿಂದೆ!
ಪಂಚಪಾತ್ರೆಯಲಿ ಪಾವನತೀರ್ಥವ  ಬಂಧಿಸುತೆ,
ವಂದನೆ ಆರಾಧನೆ ಅಭಿಷೇಕದ ನೆವದಿಂದೆ
ಅವತಾರನು ಹೊತ್ತಿಸಿದುರಿಯನು ಅಗ್ರೋದಕದಿಂ ನಂದಿಸುತೆ,
ಬೆಂಕಿಯನಾರಿಸಿ ಬೂದಿಯಮಾಡಿ,
ಆ ಬೂದಿಯ ಮಹಿಮೆಯ ಕೊಂಡಾಡಿ
ಅದೊ ಹೊರಟನು  ಪುಜಾರಿಯು ಹಿಂದೆ!
ಭಕ್ತರು ದೂರದ ತೂರ್ಯವನಾಲಿಸಿ ಬಳಿ ಬರುವನಿತರಲಿ
ಆ ತೂರ್ಯ ಮಹಾಸ್ವನವೆಲ್ಲಿ?
ಕೇಳುತಲಿದೆ ಪೂಜಾರಿಯ ಬರಿ ಕಿರುಗಂಟೆಯುಲಿ!
ಅವರಾ ಕಂಡಾ ಕಿಚ್ಚಿನ ಕಾಂತಿಯದೆಲ್ಲಿ?
ಬೆಳಕಿಗೆ ಬದಲಾಗವರನು ಕಾದಿದೆ ಬರಿ ಬೂದಿಯ ರಾಶಿ!
ಕಟ್ಟಕಡೆಯಲಿ
ದೇವರ ಗುಡಿಯಲಿ
ಪೂಜಾರಿಯೆ ದಿಟವ ನಿವಾಸಿ;
ದೇವರೆ ಪರದೇಶಿ!-
ಜ್ಯೋತಿಯ ಬಯಸುತೆ ಬಹ ಭಕ್ತರಿಗೆ ವಿಭೂತಿಯ ಹಂಚುವನು!
ಬೆಂಕಿಯ ನಂದಿಸಿ
ಬೂದಿಗೆ ವಂದಿಸಿ
ದೇವರ ಮರೆಗೈಯುತೆ ಪೂಜಾರಿಯೆ ಮಿಂಚುವನು!

ಸರಿ, ಮತ್ತೆ-
ದಿಗಂತದಿಂದೆ ದಿಗಂತಕೆ ಹಬ್ಬಿದೆ ರುಂದ್ರ ರಾತ್ರಿ!
ಸಾಂದ್ರ ತಮಂಧದಿ ಮುಳುಮುಳುಗುತ್ತೆ
ಕರಂಗಿದೋಲಿದೆ ಧಾತ್ರಿ!

೯-೯-೧೯೩೪